ಸಕಲೇಶಪುರ : ಪತ್ರದ ನೈಜತೆ ಹಾಗೂ ವಿಷಯದ ಸತ್ಯಾಸತ್ಯತೆಗಳನ್ನು ಗಂಭೀರವಾಗಿ ಗಮನಿಸಿದರೆ ಇದು ಒಂದು ಕುಚೋದ್ಯದ ಹಾಗೂ ಬೇಜವಾಬ್ದಾರಿ ಅನಿಸಿಕೆಗಳಿಂದ ಕೂಡಿದ ಪತ್ರ ಎಂಬ ಭಾವನೆ ಮೂಡುವುದು ನಿಜ.ಯಾವುದೇ ವಿದ್ಯಾರ್ಥಿನಿ ಯರಿಗೆ / ಮಹಿಳೆಯರಿಗೆ ಈ ರೀತಿ ಕಿರುಕುಳ ಉಂಟಾದಲ್ಲಿ ಪೊಲೀಸ್ ಇಲಾಖೆಯ ಟೋಲ್ ಫ್ರೀ ಸಂಖ್ಯೆಗೆ ಅಥವಾ 112 ವಾಹನಕ್ಕೆ ಕರೆ ಮಾಡಿ ದೂರು ದಾಖಲಿಸಬಹುದಿತ್ತು.

ದೂರುದಾರರ ಪತ್ರದ ಪ್ರಕಾರ ಸಕಲೇಶಪುರದ ಟ್ಯಾಕ್ಸಿ/ ಆಟೋ ಚಾಲಕರು ಚುಡಾಯಿಸುವುದಾಗಲೀ ಅಥವಾ ಇನ್ಯಾವುದೇ ರೀತಿಯ ಅವಾಚ್ಯ ಶಬ್ದಗಳನ್ನು ಬಳಸಿ ಕಿರುಕುಳ ನೀಡಿದ್ದೇ ಆಗಿದ್ದಲ್ಲಿ ಆ ನಿರ್ದಿಷ್ಟ ಟ್ಯಾಕ್ಸಿ / ಆಟೋ ಸಂಖ್ಯೆಗಳನ್ನ ಗುರುತು ಹಾಕಿಟ್ಟುಕೊಂಡು ಪೊಲೀಸ್ ಇಲಾಖೆಗಾಗಲೀ ಮಹಿಳಾ ಸಹಾಯವಾಣಿಗಾಗಲೀ ಅಥವಾ ಟ್ಯಾಕ್ಸಿ ಆಟೋ ಚಾಲಕರ ಸಂಘದ ಗಮನಕ್ಕಾಗಲೀ ತರಬಹುದಿತ್ತು.

ಸಕಲೇಶಪುರದ ಪ್ರಗತಿಪರ ಜನಪರ ಸಂಘಟನೆಗಳಿಗೆ ವಿಷಯ ಮುಟ್ಟಿಸಿದ್ದರೂ ಕೂಡ “ನೊಂದ ವಿದ್ಯಾರ್ಥಿನಿಯರಿಗೆ “ನ್ಯಾಯ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿತ್ತು.ಆದರೆ ಇದ್ಯಾವುದನ್ನೂ ಮಾಡದೆ ಸಕಲೇಶಪುರದ ಸಮಗ್ರ ಟ್ಯಾಕ್ಸಿ/ಆಟೋ ಚಾಲಕರನ್ನು ಮಹಿಳೆಯರ ಪೀಡಕರು / ಕಾಮುಕ ದೃಷ್ಟಿ ಉಳ್ಳವರು ಹಾಗೂ ಮಹಿಳೆಯರ ಕುರಿತು ಗೌರವ ಭಾವನೆ ಇಲ್ಲದವರು ಎಂಬ ಭಾವನೆ ಬರುವ ಹಾಗೆ ಪತ್ರದಲ್ಲಿ ನಮೂದಿಸಲಾಗಿದೆ.

ಇದರಿಂದಾಗಿ ಸಕಲೇಶಪುರದ ಶ್ರಮಜೀವಿಗಳಾದ ಟ್ಯಾಕ್ಸಿ/ಆಟೋ ಚಾಲಕರ ಮನಸ್ಸಿಗೆ ಹಾಗೂ ಅವರ ಕುಟುಂಬದವರಿಗೆ ಬಹಳ ನೋವುಂಟು ಮಾಡಲಾಗಿದೆ.

ಟ್ಯಾಕ್ಸಿ/ಆಟೋ ಚಾಲಕರು ಕೂಡ ಕುಟುಂಬಸ್ಥರೇ ಆಗಿದ್ದುಕೊಂಡು ಜೀವನ ನಿರ್ವಹಣೆಗಾಗಿ ಚಾಲಕರ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ.ಹೀಗಿರುವಾಗ ಯಾವುದೇ ನಿಖರವಾದ ಮಾಹಿತಿ ನೀಡದೆ ಸ್ಪಷ್ಟವಾಗಿ ವಿಚಾರಗಳನ್ನು ದಾಖಲಿಸದೆ ಮನಸೋ ಇಚ್ಚೆ ಬರೆದು “ಅನಾಮಧೇಯ ಪತ್ರದ ” ರೂಪದಲ್ಲಿ ದೂರು ಸಲ್ಲಿಸಿರುವುದು ಖಂಡನೀಯ.

ಇಂದು ಟ್ಯಾಕ್ಸಿ/ಆಟೋ ಚಾಲಕರ ವಿರುದ್ಧ ಈ ರೀತಿ ಬೇನಾಮಿ ಪತ್ರ ಸೃಷ್ಟಿಸಿರುವ ಕಾಣದ ಕೈಗಳು ನಾಳೆ ಬೇರೆ ಸಂಘ ಸಂಸ್ಥೆಗಳು ಹಾಗೂ ಜನಪರ ಕಾಳಜಿ ಇರುವ ಸಂಘಟನೆಗಳ ವಿರುದ್ಧ ಕೂಡ ಆಧಾರ ರಹಿತ ಆರೋಪಗಳನ್ನು ಹೊರಿಸುವ ಎಲ್ಲ ಸಾಧ್ಯತೆಗಳು ಇದ್ದೇ ಇರುತ್ತವೆ.

ಈ ರೀತಿ ಬೇಜವಾಬ್ದಾರಿತನದ ಬೇನಾಮಿ ಪತ್ರಗಳನ್ನು ಗಂಭೀರವಾಗಿ ಪರಿಗಣಿಸಬಾರದೆಂದೂ ಮತ್ತು ಈ ರೀತಿ ದುಡಿಯುವ ವರ್ಗದವರ ಕುರಿತು ಅವಹೇಳನಕಾರಿ ಅಭಿಪ್ರಾಯ ದಾಖಲಿಸುವ ಅನಾಮಧೇಯ ಪತ್ರವನ್ನು ಸೃಷ್ಟಿಸಿದವರನ್ನು ಆದಷ್ಟು ಶೀಘ್ರವಾಗಿ ತನಿಖೆ ನಡೆಸಿ ಪತ್ತೆ ಹಚ್ಚಬೇಕೆಂದು ಕರವೇ (ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷರಾದ ರಮೇಶ್ ಪೂಜಾರಿ ಆಗ್ರಹಿಸಿದ್ದಾರೆ.

ಮುಂದುವರೆದಂತೆ ಈ ರೀತಿ ನಿಜಕ್ಕೂ ಕಿರುಕುಳದ ಘಟನೆ ನಿಜಕ್ಕೂ ನಡೆದಿದ್ದೇ ಆದಲ್ಲಿ ಸಹೋದರಿಯರು/ತಾಯಂದಿರು ಯಾವುದೇ ಹಿಂಜರಿಕೆ ಇಲ್ಲದೆ ಕರವೇ ಪದಾಧಿಕಾರಿಗಳ ಗಮನಕ್ಕೆ ತಂದಿದ್ದೇ ಆದಲ್ಲಿ ವೇದಿಕೆ ನೊಂದ ಮಹಿಳೆಯರ ನೆರವಿಗೆ ಸರ್ವ ರೀತಿಯಲ್ಲೂ ಸ್ವಂದಿಸುವುದಾಗಿ ತಿಳಿಸಿರುತ್ತಾರೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *