
ಸಕಲೇಶಪುರ : ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಏಪ್ರಿಲ್ 28ರಂದು ಚುಟುಕು ಕವಿ ಕಾವ್ಯ ಕಾಜಾಣ ಮತ್ತು ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಬಸವಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಸಕಲೇಶಪುರ ಪಟ್ಟಣದ ಲಯನ್ಸ್ ಸಭಾಂಗಣದ ಜಾನಪದ ಜಂಗಮ ಎಸ್ ಕೆ ಕರೀಂ ಖಾನ್ ವೇದಿಕೆಯಲ್ಲಿ ಏರ್ಪಡಿಸಲಾಗಿದೆ ಎಂದು ಸಕಲೇಶಪುರ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲೇಶ್ ಜಿ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕರಾದ ಡಾ ಎಂ ಜಿ ಆರ್ ಅರಸ್ ನೆರವೇರಿಸುವರು. ಹಾಸನ ಜಿಲ್ಲಾ ಚು ಸಾ ಪ ಅಧ್ಯಕ್ಷ ಬಾ ನಂ ಲೋಕೇಶ್ ಅಧ್ಯಕ್ಷತೆ ವಹಿಸುವರು.
ಸಕಲೇಶಪುರ ಆಲೂರು ಕಟ್ಟಾಯ ವಿಧಾನ ಸಭಾ ಶಾಸಕರಾದ ಮಂಜುನಾಥ್ ಎಸ್ (ಸಿಮೆಂಟ್ ಮಂಜು)ರವರು ಬಸವೇಶ್ವರ ಪುತ್ತಳಿಗೆ ಮಾಲಾರ್ಪಣೆ ಮಾಡುವರು.
ಯಸಳೂರಿನ ತೆಂಕಲಗೂಡು ಬೃಹನ್ಮಠದ ಶ್ರೀ ಶ್ರೀ ಶ್ರೀ ಷ. ಬ್ರ. ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸುವರು.
ಕನ್ನಡ ಧ್ವಜಾರೋಹಣವನ್ನು ಲಯನ್ಸ್ ಮಾಜಿ ರಾಜ್ಯಪಾಲರಾದ ಸಂಜಿತ್ ಶೆಟ್ಟಿ ಚುಟುಕು ಸಾಹಿತ್ಯ ಪರಿಷತ್ ಧ್ವಜಾರೋಹಣವನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ತಮ್ಮಣ್ಣ ಶೆಟ್ಟಿ ಮಾಡುವರು.
ಉಪ ವಿಭಾಗಾಧಿಕಾರಿ ಡಾ ಶ್ರುತಿ ಯವರು ಬಸವಶ್ರೀ ಪುರಸ್ಕೃತರನ್ನು ಸನ್ಮಾನಿಸುವರು. ಕವಿ ಗೋಷ್ಠಿ ಅಧ್ಯಕ್ಷತೆಯನ್ನು ಬೇಲೂರ್ ನವಾಬ್ ವಹಿಸುವರು.
ತಹಸೀಲ್ದಾರ್ ಅರವಿಂದ್ ಕೆ ಎಂ ಪಥಸಂಚಲನಕ್ಕೆ ಚಾಲನೆ ನೀಡುವರು.
ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪರವರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸುವರು. ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸುಮಾರು ಎಂಬತ್ತಕ್ಕೂ ಹೆಚ್ಚು ಕವಿಗಳು ಭಾಗವಹಿಸುವರು ಎಂದು ಸಕಲೇಶಪುರ ತಾಲ್ಲೂಕು ಚು ಸಾ ಪ ಅಧ್ಯಕ್ಷ ಮಲ್ಲೇಶ್ ಜಿ ತಿಳಿಸಿದ್ದಾರೆ.