ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭದ್ರತಾ ಲೋಪವಾಗಿದೆ ಎಂದು ಗುರುವಾರ (ಏ.24) ನಡೆದ ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರ್ಕಾರ ಒಪ್ಪಿಕೊಂಡಿರುವುದಾಗಿ ಮೂಲಗಳು ಹೇಳಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

“ಏನೂ ತಪ್ಪಾಗಿಲ್ಲದಿದ್ದರೆ, ನಾವು ಇಲ್ಲಿ ಏಕೆ ಕುಳಿತುಕೊಳ್ಳುತ್ತಿದ್ದೆವು? ಎಲ್ಲೋ ಕೆಲವು ಕಡೆ ಲೋಪಗಳಾಗಿವೆ, ಅದನ್ನು ನಾವು ಕಂಡುಹಿಡಿಯಬೇಕು” ಎಂದು ಆಡಳಿತ ಪಕ್ಷದ ನಾಯಕರೊಬ್ಬರು ಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಹೇಳಿದ್ದಾಗಿ ವರದಿ ತಿಳಿಸಿದೆ.

ವಿವಿಧ ರಾಜ್ಯಗಳ 26 ಜನರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯ ಕುರಿತು ವಿರೋಧ ಪಕ್ಷದ ನಾಯಕರಿಗೆ ಮಾಹಿತಿ ನೀಡಲು ಸರ್ಕಾರ ಸರ್ವಪಕ್ಷ ಸಭೆ ಕರೆದಿತ್ತು.ಸಭೆಯಲ್ಲಿ, ಹಲವು ಪ್ರತಿಪಕ್ಷ ನಾಯಕರು ಭದ್ರತಾ ಶಿಷ್ಟಾಚಾರಗಳ ಸ್ಪಷ್ಟ ವೈಫಲ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ, ಭದ್ರತಾ ಪಡೆಗಳು ಎಲ್ಲಿದ್ದವು? ಕೇಂದ್ರ ಮೀಸಲು ಪೊಲೀಸ್ ಪಡೆ ಎಲ್ಲಿತ್ತು? ಎಂದು ಹಲವರು ಪ್ರಶ್ನಿಸಿದ್ದಾರೆ ಎಂದು ಮೂಲಗಳು ಹೇಳಿದ್ದಾಗಿ ಇಂಡಿಯಾ ಟುಡೇ ವರದಿ ತಿಳಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರ, ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಬಳಿಯ ಬೈಸರನ್ ಹುಲ್ಲುಗಾವಲು ಪ್ರದೇಶವನ್ನು ಪ್ರವಾಸಿಗರ ಭೇಟಿಗೆ ಮುಕ್ತವಾಗಿಸುವ ಮೊದಲು ಸ್ಥಳೀಯ ಅಧಿಕಾರಿಗಳು ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಿರಲಿಲ್ಲ ಎಂದಿದೆ.

ಸಾಂಪ್ರದಾಯಿಕವಾಗಿ ಜೂನ್‌ನಲ್ಲಿ ಅಮರನಾಥ ಯಾತ್ರೆಯವರೆಗೆ ಈ ಪ್ರದೇಶ ಪ್ರವಾಸಿಗರ ಭೇಟಿಗರ ನಿರ್ಬಂಧಿತವಾಗಿರುತ್ತದೆ ಎಂದು ವರದಿ ಹೇಳಿದೆ.

ಘಟನೆಗೆ ತಡವಾಗಿ ಪ್ರತಿಕ್ರಿಯಿಸಿದ ಬಗ್ಗೆಯೂ ಸಭೆಯಲ್ಲಿ ಕಳವಳ ವ್ಯಕ್ತವಾಗಿದೆ. ಮೂಲಗಳ ಪ್ರಕಾರ, ಸರ್ಕಾರಿ ಅಧಿಕಾರಿಗಳು ಈ ಸ್ಥಳವು 45 ನಿಮಿಷಗಳ ಬೆಟ್ಟದ ನಡಿಗೆಯ ದೂರದಲ್ಲಿದೆ ಮತ್ತು ಅಂತಹ ತುರ್ತು ಪರಿಸ್ಥಿತಿಗಳನ್ನು ತ್ವರಿತವಾಗಿ ನಿರ್ವಹಿಸಲು ಯಾವುದೇ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (ಎಸ್‌ಒಪಿ) ಜಾರಿಯಲ್ಲಿಲ್ಲ ಎಂದು ವಿವರಿಸಿದ್ದಾರೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು, ಭಾರತ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಎಲ್ಲಾ ಪಕ್ಷಗಳು ಒಪ್ಪಿಕೊಂಡಿವೆ ಎಂದು ಹೇಳಿದ್ದಾರೆ.

ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ಎಲ್ಲಾ ಪಕ್ಷಗಳು ಸರ್ಕಾರದ ಜೊತೆಗಿದ್ದೇವೆ ಎಂದು ಹೇಳಿವೆ. ಎಲ್ಲಾ ರಾಜಕೀಯ ಪಕ್ಷಗಳು ಈ ಸಂದೇಶವನ್ನು ನೀಡಿವೆ ಮತ್ತು ಎಲ್ಲಾ ಪಕ್ಷಗಳ ನಾಯಕರು ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ಅದನ್ನು ಬೆಂಬಲಿಸುತ್ತೇವೆ ಎಂದು ಒಂದೇ ಧ್ವನಿಯಲ್ಲಿ ಹೇಳಿದ್ದಾರೆ. ಸಭೆ ಸಕಾರಾತ್ಮಕವಾಗಿ ಕೊನೆಗೊಂಡಿದೆ” ಎಂದು ರಿಜಿಜು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಕೈಗೊಳ್ಳುವ ಯಾವುದೇ ಕ್ರಮಕ್ಕೆ ವಿರೋಧ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಸರ್ವಪಕ್ಷ ಸಭೆಯಲ್ಲಿ ಯಾರೆಲ್ಲ ಭಾಗವಹಿಸಿದ್ದರುಸರ್ವಪಕ್ಷ ಸಭೆಯಲ್ಲಿ ಸರ್ಕಾರದ ಪರವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್. ಜೈಶಂಕರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇದ್ದರು.

ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಪ್ರಮುಖ ಸಂಸದೀಯ ನಾಯಕರು, ರಾಜ್ಯಸಭೆಯ ಸದನದ ನಾಯಕ ಜೆ.ಪಿ. ನಡ್ಡಾ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದರು.ಸುಪ್ರಿಯಾ ಸುಳೆ (ಎನ್‌ಸಿಪಿ-ಎಸ್‌ಪಿ), ಪ್ರಫುಲ್ ಪಟೇಲ್ (ಎನ್‌ಸಿಪಿ), ಅಸಾದುದ್ದೀನ್ ಓವೈಸಿ (ಎಐಎಂಐಎಂ), ಸಸ್ಮಿತ್ ಪಾತ್ರ (ಬಿಜೆಡಿ), ಲವು ಶ್ರೀ ಕೃಷ್ಣ ದೇವರಾಯಲು (ಟಿಡಿಪಿ), ಶ್ರೀಕಾಂತ್ ಶಿಂಧೆ (ಶಿವಸೇನೆ), ಸಂಜಯ್ ಸಿಂಗ್ (ಎಎಪಿ), ಸುದೀಪ್ ಬಂಡೋಪಾಧ್ಯಾಯ (ಟಿಎಂಸಿ), ಪ್ರೇಮಚಂದ್ ಗುಪ್ತಾ (ಆರ್‌ಜೆಡಿಕೆ), ಶಿವಪಾಲ್ (ಆರ್‌ಜೆಡಿ) ಸಭೆಯಲ್ಲಿ ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *