ಸಕಲೇಶಪುರ :- ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ಕರಡಿಗಾಲ ಗ್ರಾಮದ ಕಾಲೋನಿಗೆ ಹೋಗುವ ರಸ್ತೆ ಅವೈಜ್ಞಾನಿಕವಾಗಿ ಮಾಡಿದ್ದು ಮಳೆಯ ನೀರು ರಸ್ತೆಯ ಪಕ್ಕದಲ್ಲಿರುವ ಮನೆಗಳಿಗೆ ಹಾಗೂ ರಸ್ತೆ ಮದ್ಯೆ ನುಗ್ಗುವುದರೊಂದಿಗೆ ಅಕ್ಕ ಪಕ್ಕದ ಮನೆಯವರು ಮಳೆ ನೀರಿನಿಂದಾಗಿ ಸಮಸ್ಯೆ ಅನುಭವಿಸುತ್ತಿದ್ದಾರೆ.
ಈ ಭಾಗದಲ್ಲಿ ಅತಿ ಹೆಚ್ಚಿನ ಮಳೆ ಬರುವುದರಿಂದ, ಹಳ್ಳಿ ಭಾಗದ ರಸ್ತೆಗಳು ಸರಿ ಇಲ್ಲದ ಕಾರಣ ಜನರು ಪರದಾಡುವಂತಹ ಸ್ಥಿತಿ ಎದುರಾಗಿದೆ.ಎತ್ತಿನಹೊಳೆ ಅನುದಾನಗಳು ನಿರ್ಮಿಸಿರುವ ಸಿಮೆಂಟ್ ರಸ್ತೆಗೆ ಮಳೆ ನೀರಿಗೆ ನಿರ್ಮಿಸಬೇಕಾಗಿದ್ದ ಮೋರಿಯನ್ನು ನಿರ್ಮಿಸದೆ ಮಳೆಯ ನೀರು ಎಲ್ಲಾ ಮನೆ ಹಾಗೂ ರಸ್ತೆಯ ಮಧ್ಯೆ ಹರಿದು ಹೋಗುತ್ತಿದೆ. ಇದರಿಂದ ಅಕ್ಕಪಕ್ಕದ ಮನೆಯವರು ವಾಸ ಮಾಡುವುದಕ್ಕೆ ತೊಂದರೆಯಾಗಿದ್ದು ಹಾಗೂ ಪ್ರತಿದಿನ ರಸ್ತೆಯ ಮಧ್ಯದಲ್ಲಿ ಹೋಗುತ್ತಿರುವ ನೀರು ರಸ್ತೆಯ ಹಾಳು ಮಾಡುವ ಸ್ಥಿತಿಗೆ ಎಡೆ ಮಾಡಿಕೊಟ್ಟಿದೆ. ಇದಕ್ಕೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ದಿನಾಂಕ:- 16.06.23 ರಂದು ಮನವಿ ಸಲ್ಲಿಸಿದ್ದಾರೆ.
ಇಷ್ಟೆಲ್ಲ ಸಮಸ್ಯೆಯು ಕಳೆದ 5 ವರ್ಷದಿಂದ ಇದ್ದರೂ ಕೂಡ ಸಮಸ್ಯೆಗೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯಿತಿಗೆ ಗ್ರಾಮದ ನಿವಾಸಿ ಮನು ಕುಮಾರ್ ಕೆ.ಎ ಅನೇಕ ಬಾರಿ ಮನವಿ ಕೊಟ್ಟರು ಕೂಡ ಯಾರು ಸ್ಪಂದಿಸುತ್ತಿಲ್ಲ.ಅಲ್ಲದೆ ಕರಡಿಗಾಲ ಕಾಲೋನಿಗೆ ಹೋಗುವ ರಸ್ತೆ ಪ್ರತಿದಿನ ಮಳೆಯಿಂದ ಹಾನಿಯಾಗುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ತುಂಬಾ ಬಾರಿ ಮೋರಿ ಕೊಡುವಂತೆ ಕೇಳಿಕೊಂಡರು ಕೂಡ ಗ್ರಾಮ ಪಂಚಾಯಿತಿಯಲ್ಲಿ ಆದಾಯದ ಮೂಲ ಇಲ್ಲ , ಹಣಕಾಸು ಇಲ್ಲ, ಮುಂದಿನ ಬಾರಿ ಮೋರಿ ವ್ಯವಸ್ಥೆ ಮಾಡಿ ಕೊಡೋಣ ಎಂದು ಹಾರಿಕೆ ಉತ್ತರ ಕೊಡುತ್ತಿದ್ದಾರೆ. ಇದರಿಂದ ನೊಂದ ಗ್ರಾಮಸ್ಥರು ಶುಕ್ರವಾರ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾರೆ.
ಸಂಬಂಧಪಟ್ಟವರು ದಯಮಾಡಿ ಮೋರಿ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವಂತೆ ಕರಡಿಗಾಲ ಗ್ರಾಮಸ್ಥರು ಹಾಗೂ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಹುತೇಕ ಜನರು ಈ ಮೂಲಕ ಒತ್ತಾಯಿಸಿದ್ದಾರೆ.