ಅಮರಾವತಿ/ಕೊಲಂಬೊ: ಪ್ರೀತಿಗೆ ವಯಸ್ಸು, ಗಡಿ ಅನ್ನೋದೇ ಇಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಇತ್ತೀಚೆಗೆ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್‌ ಪಬ್‌ಜೀ ಪ್ರೇಮಿಗಾಗಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿರತ್ತು. ಈ ಬೆನ್ನಲ್ಲೇ ಬಾಂಗ್ಲಾದೇಶದಿಂದ, ಪೊಲೇಂಡಿನಿಂದ ಭಾರತಕ್ಕೆ ತಮ್ಮ ಪ್ರೇಮಿಗಳನ್ನ ಹರಸಿ ಬಂದ ಉದಾಹರಣೆಗಳಿವೆ. ಅಲ್ಲದೇ ಭಾರತದ ವಿವಾಹಿತ ಮಹಿಳೆ ಅಂಜು ತನ್ನ ಇನ್‌ಸ್ಟ್ರಾಗ್ರಾಮ್‌ ಪ್ರೇಮಿಗಾಗಿ ಪಾಕಿಸ್ತಾನಕ್ಕೆ ಹೋದ ಉದಾಹರಣೆಯಿದೆ. ಅದೇ ರೀತಿ ಶ್ರೀಲಂಕಾ ಮಹಿಳೆ ಸುದ್ದಿಯಲ್ಲಿದ್ದಾಳೆ.

ಶ್ರೀಲಂಕಾದ ಮಹಿಳೆಯೊಬ್ಬರು ಫೇಸ್‌ಬುಕ್‌ನಲ್ಲಿ ಪರಿಚಯವಾದ ಭಾರತೀಯ ವ್ಯಕ್ತಿಯೊಬ್ಬನನ್ನ ಹುಡುಕಿಕೊಂಡು ಭಾರತಕ್ಕೆ ಬಂದು ಮದುವೆಯಾಗಿದ್ದಾರೆ. ವಿಘ್ನೇಶ್ವರಿ ಶಿವಕುಮಾರ್‌ ಹೆಸರಿನ‌ 25 ವರ್ಷದ ಮಹಿಳೆ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದಾಳೆ. ಇದೀಗ ಫೇಸ್‌ಬುಕ್‌ನಲ್ಲಿ ಪರಿಚಯವಾದ ಆಂಧ್ರಪ್ರದೇಶದ ವೆಂಕಟಗಿರಿಕೋಟಾ ಪಟ್ಟಣ 28 ವರ್ಷದ ಗೆಳೆಯ ಲಕ್ಷ್ಮಣ್‌ನನ್ನ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದೇ ತಿಂಗಳ ಆಗಸ್ಟ್‌ 6ಕ್ಕೆ ವಿಘ್ನೇಶ್ವರಿ ಶಿವಕುಮಾರ್‌ ಪ್ರವಾಸಿ ವೀಸಾದ ಅವಧಿ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ನಿಯಮಗಳಿಗೆ ಅನುಸಾರವಾಗಿ ಚಿತ್ತೂರು ಜಿಲ್ಲಾ ಪೊಲೀಸರು ವಿಘ್ನೇಶ್ವರಿಗೆ ನೋಟಿಸ್‌ ನೀಡಿದ್ದಾರೆ. ಸದ್ಯ ಮದುವೆ ಫೋಟೊ ಜಾಲತಾಣದಲ್ಲಿ ವೈರಲ್‌ ಆಗಿದೆ.

ಲಂಕಿಣಿ ಹಾರಿಬಂದದ್ದು ಹೇಗೆ?2017ರಲ್ಲಿ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ವಿಘ್ನೇಶ್ವರಿ ಮತ್ತು ಲಕ್ಷ್ಮಣ್‌ ಮೊದಲು ಸ್ನೇಹಿತರಾಗಿದ್ದರು. ನಂತರ ಸ್ನೇಹ ಪ್ರೀತಿಗೆ ತಿರುಗಿತ್ತು. ಜುಲೈ 8 ರಂದು ಆಂಧ್ರಪ್ರದೇಶಕ್ಕೆ ಬಂದಿಳಿದ ವಿಘ್ನೇಶ್ವರಿ, ಜುಲೈ 20 ರಂದು ದೇವಸ್ಥಾನದಲ್ಲಿ ಇಬ್ಬರು ಮದುವೆಯಾಗಿದ್ದರು. ವಿವಾಹದ ನಂತರ ವಿಘ್ನೇಶ್ವರಿ ಭಾರತದ ಪೌರತ್ವಕ್ಕೆ ಬೇಡಿಕೆಯಿಟ್ಟಿದ್ದಾರೆ. ಆದ್ದರಿಂದ ಆಕೆಯ ವೀಸಾ ಅವಧಿಯನ್ನ ವಿಸ್ತರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *