ವಿಧಾನಸಭೆ ಚುನಾವಣೆಗೆ ಕಳೆದ ಒಂದು ವಾರದಿಂದ ಸಲ್ಲಿಕೆಯಾಗಿರುವ ನಾಮಪತ್ರಗಳ ಪರಿಶೀಲನೆ ಕಾರ್ಯವು ಶುಕ್ರವಾರ ನಡೆದಿದ್ದು, 4989 ನಾಮಪತ್ರಗಳು ಕ್ರಮಬದ್ಧವಾಗಿವೆ. ಸುಮಾರು 500ಕ್ಕೂ ಹೆಚ್ಚು ನಾಮಪತ್ರಗಳು ತಿರಸ್ಕೃತಗೊಂಡಿವೆ. ಸವದತ್ತಿ-ಯಲ್ಲಮ್ಮ, ಔರಾದ್‌, ಹಾವೇರಿ, ರಾಯಚೂರು ಮತ್ತು ಶಿವಾಜಿನಗರ ಕ್ಷೇತ್ರದಲ್ಲಿ ನಾಮಪತ್ರಗಳ ಪರಿಶೀಲನೆ ಕಾರ್ಯವು ತಡರಾತ್ರಿಯವರೆಗೆ ನಡೆದಿದೆ. ಪರಿಶೀಲನೆ ಕಾರ್ಯ ತಡರಾತ್ರಿ ಮುಗಿದ ಹಿನ್ನೆಲೆಯಲ್ಲಿ ಶನಿವಾರ ನಾಮಪತ್ರಗಳ ಕ್ರಮಬದ್ಧ ಸಂಖ್ಯೆಯ ಬಗ್ಗೆ ಸ್ಪಷ್ಟಚಿತ್ರಣ ಲಭ್ಯವಾಗಲಿದೆ. ಐದು ಕ್ಷೇತ್ರಗಳನ್ನು ಹೊರತುಪಡಿಸಿದರೆ 4989 ನಾಮಪತ್ರಗಳು ಕ್ರಮಬದ್ಧವಾಗಿವೆ. ಈ ಪೈಕಿ 4607 ನಾಮಪತ್ರಗಳನ್ನು ಪುರುಷರು ಸಲ್ಲಿಸಿದ್ದು, 381 ನಾಮಪತ್ರಗಳು ಮಹಿಳೆಯರು ಸಲ್ಲಿಸಿದ್ದಾಗಿವೆ. ಇತರೆ ಒಂದು ನಾಮಪತ್ರವು ಕ್ರಮಬದ್ಧವಾಗಿದೆ. ಬಿಜೆಪಿ 219, ಕಾಂಗ್ರೆಸ್‌ 218, ಜೆಡಿಎಸ್‌ 207, ಎಎಪಿ 207, ಬಿಎಸ್‌ಪಿ 135, ಸಿಪಿಐಎಂ 4, ನೋಂದಾಯಿತ ಮಾನ್ಯತೆ ಪಡೆಯದ ಪಕ್ಷಗಳಿಂದ 720, ಪಕ್ಷೇತರರ 1334 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾ ಆಯೋಗವು ತಿಳಿಸಿದೆ. ಸೋಮವಾರ ನಾಮಪತ್ರಗಳನ್ನು ವಾಪಸ್‌ ತೆಗೆದುಕೊಳ್ಳಲು ಅಂತಿಮ ದಿನವಾಗಿದೆ. ಉಮೇದುವಾರಿಕೆಗಳ ಹಿಂತೆಗೆತ ಕಾರ್ಯ ಪೂರ್ಣಗೊಂಡ ಬಳಿಕ ಚುನಾವಣಾ ಅಖಾಡದಲ್ಲಿ ಎಷ್ಟುಹುರಿಯಾಳುಗಳು ಇದ್ದಾರೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಲಿದೆ. ಬಹಳಷ್ಟುಮಂದಿ ನಾಮಪತ್ರಗಳನ್ನು ವಾಪಸ್‌ ತೆಗೆದುಕೊಳ್ಳುವ ಸಾಧ್ಯತೆ ಇದೆ. ನಾಮಪತ್ರ ಹಿಂತೆಗೆತ ಬಳಿಕ ಚುನಾವಣಾ ಕಣದಲ್ಲಿರುವ ಅಧಿಕೃತ ಅಭ್ಯರ್ಥಿಗಳ ಸಂಖ್ಯೆ ಗೊತ್ತಾಗಲಿದೆ. ಸೋಮವಾರ ರಾತ್ರಿಯ ವೇಳೆಗೆ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆಯ ಬಗ್ಗೆ ಗೊತ್ತಾಗಲಿದೆ. ನಾಮಪತ್ರಗಳ ಹಿಂತೆಗೆತ ಬಳಿಕ ಚುನಾವಣಾ ಕಾವು ಮತ್ತಷ್ಟುರಂಗೇರಲಿದೆ. ಮೇ 8ರವರೆಗೆ ಭರ್ಜರಿ ರೋಡ್‌ಶೋ, ಬೃಹತ್‌ ಸಮಾವೇಶಗಳು, ಮೆರವಣಿಗೆಗಳು ನಡೆಯಲಿದ್ದು, ಅಭ್ಯರ್ಥಿಗಳ ಪರ ರಾಜಕೀಯ ಪಕ್ಷಗಳ ಮುಖಂಡರು ಮತ ಯಾಚಿಸಲಿದ್ದಾರೆ.ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದ ನಂತರ 3632 ಅಭ್ಯರ್ಥಿಗಳಿಂದ ಒಟ್ಟು 5102 ಉಮೇದುವಾರಿಕೆ ಸಲ್ಲಿಕೆಯಾಗಿವೆ. 3327 ಪುರುಷ ಅಭ್ಯರ್ಥಿಗಳಿಂದ 4710, 304 ಮಹಿಳಾ ಅಭ್ಯರ್ಥಿಗಳಿಂದ 391 ನಾಮಪತ್ರಗಳು ಸಲ್ಲಿಕೆಯಾಗಿವೆ. ಒಬ್ಬರು ಇತರರು ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ 707, ಕಾಂಗ್ರೆಸ್‌ 651, ಜೆಡಿಎಸ್‌ 455, ಎಎಪಿ 373, ಬಿಎಸ್‌ಪಿ 179, ಸಿಪಿಐಎಂ 5, ಎನ್‌ಪಿಪಿ 5 ನಾಮಪತ್ರಗಳನ್ನು ಸಲ್ಲಿಕೆಯಾಗಿದ್ದವು. ಇವುಗಳ ಪರಿಶೀಲನೆ ಬಳಿಕ ಅಖಾಡದಲ್ಲಿ ಉಳಿಯುವ ಅಭ್ಯರ್ಥಿಗಳ ನಿಖರವಾದ ಮಾಹಿತಿ ಸಿಗಲಿದೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed