
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಹೃದಯದಲ್ಲಿ ಎಬಿ ಡಿವಿಲಿಯರ್ಸ್ ವಿಶೇಷ ಸ್ಥಾನ ಪಡೆದುಕೊಂಡಿದ್ದಾರೆ. ಭಾರತದಲ್ಲಿ ಕೂಡ ಎಬಿ ಡಿವಿಲಿಯರ್ಸ್ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದಶಕಗಳ ಕಾಲ ತಮ್ಮ 360 ಡಿಗ್ರಿ ಬ್ಯಾಟಿಂಗ್‌ನಿಂದ ಅಭಿಮಾನಿಗಳನ್ನು ರಂಜಿಸಿದ ಎಬಿಡಿ 2021ರ ಐಪಿಎಲ್ ನಂತರ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.
*ಆರ್ ಸಿಬಿ ತಂಡದ ಮಾಜಿ ಆಟಗಾರರಾದ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್‌ಗೆ ಫ್ರಾಂಚೈಸಿ ಹಾಲ್ ಆಫ್ ಫೇಮ್ ನೀಡಿ ಗೌರವಿಸಿದೆ. ಮಾರ್ಚ್ 26ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಮತ್ತೆ ಒಂದಾಗಿದ್ದರು*
ಎಬಿ ಡಿವಿಲಿಯರ್ಸ್ ಭಾರತದ ಜೊತೆ ಅದರಲ್ಲೂ ಬೆಂಗಳೂರಿನ ಜೊತೆ ವಿಶೇಷ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಇಲ್ಲಿನ ಜನ ಕೂಡ ಎಬಿಡಿ ಅವರನ್ನು ಅಷ್ಟೇ ಅಭಿಮಾನಿಸಿದ್ದಾರೆ. ಹಾಲ್ ಆಫ್ ಫೇಮ್ ಪಡೆದ ನಂತರ ಎಬಿ ಡಿವಿಲಿಯರ್ಸ್ ತಮ್ಮ ಮಾಜಿ ತಂಡಕ್ಕೆ, ಅಭಿಮಾನಿಗಳಿಗೆ, ವಿರಾಟ್ ಕೊಹ್ಲಿ ಕುರಿತು ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.