ಹಾಸನ: ನೇಪಾಳ ಪತ್ರಿಕೋದ್ಯಮಕ್ಕೆ ಆರು ದಶಕಗಳ ಇತಿಹಾಸ ಇದ್ದು, ಇಲ್ಲಿನಂತೆಯೇ ಅಲ್ಲಿಯೂ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಹೆಚ್ಚು ಮಹಿಳಾ ಪತ್ರಕರ್ತರು ಮಾಧ್ಯಮ ಕ್ಷೇತ್ರಕ್ಕೆ ಬರಬೇಕೆಂದು ನೇಪಾಳ ದೇಶದ ಹಿರಿಯ ಪತ್ರಕರ್ತರಾದ ಸಮ್ಜಾನಾ ಪೌಡಲ್ ಅಭಿಪ್ರಾಯಪಟ್ಟರು.
ನಗರದ ಹೊರವಲಯದಲ್ಲಿರುವ ಪವನಪುತ್ರ ರೆಸಾರ್ಟ್ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಹಾಸನ, ಕೊಡಗು, ಚಿಕ್ಕಮಗಳೂರು ಮಲೆನಾಡು ಮೂರು ಜಿಲ್ಲೆಗಳ ಪತ್ರಕರ್ತರೊಂದಿಗೆ ನೇಪಾಳ, ಶ್ರೀಲಂಕಾ ಪತ್ರಕರ್ತರ ಬಾಂಧವ್ಯ ಬೆಸೆದ ಮಿಲನ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಪತ್ರಕರ್ತರು ಕೌಟುಂಬಿಕ ಜವಾಬ್ದಾರಿಗಳ ಜತೆಗೆ ಪತ್ರಿಕೋದ್ಯಮದ ಕೆಲಸಗಳನ್ನು ನಿಬಾಯಿಸುವುದು ಕಷ್ಟಕರ ಎನ್ನುವ ಕಾರಣಕ್ಕಾಗಿ ಹೆಚ್ಚಿನ ಸ್ತ್ರೀಯರು ಪತ್ರಿಕೋದ್ಯಮಕ್ಕೆ ಬರುತ್ತಿಲ್ಲ.
ಕರೊನಾ ಸಮಯದಲ್ಲಿ ಪತ್ರಕರ್ತರು ಎಲ್ಲೆಡೆ ಓಡಾಡುತ್ತಾರೆ. ಸೋಂಕು ಹರಿಡಿಸುತ್ತಾರೆ ಎನ್ನುವ ಕಾರಣಕ್ಕಾಗಿ ಮನೆ ಮಾಲೀಕರು ಬಾಡಿಗೆಗೆ ಮನೆ ನೀಡುತ್ತಿರಲಿಲ್ಲ. ಬಾಡಿಗೆಗಿದ್ದ ಪತ್ರಕರ್ತರನ್ನು ಮನೆ ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದರ. ಅಂತಹ ಸಮಸ್ಯೆಗಳ ನಡುವೆಯೂ ನಾನು ಪತ್ರಕರ್ತೆಯಾಗಿ ಉಳಿದಿದ್ದೇನೆ. ಹಾಸನದ ಪತ್ರಕರ್ತರೊಂದಿಗಿನ ಒಡನಾಟ ಅದ್ಭುತ ಅನುಭವ ನೀಡಿದೆ ಎಂದರು.
ಒಳಗೊಳ್ಳುವಿಕೆ, ಲಿಂಗ ಸಮಾನತೆ ಮತ್ತು ಪತ್ರಿಕೋದ್ಯಮದ ಸಮಗ್ರತೆಯ ಸಂರಕ್ಷಣೆಗಾಗಿ ನಾವು ಶ್ರಮಿಸೋಣ. ಒಟ್ಟಾಗಿ, ನೇಪಾಳಿ ಪತ್ರಕರ್ತರ ಒಕ್ಕೂಟದಂತಹ ಸಂಸ್ಥೆಗಳು ಮತ್ತು ಗಡಿಯುದ್ದಕ್ಕೂ ಸಹಯೋಗದ ಪ್ರಯತ್ನಗಳ ಮೂಲಕ, ನಾವು ಸವಾಲುಗಳನ್ನು ಜಯಿಸಬಹುದು ಮತ್ತು ಮುಕ್ತ ಮತ್ತು ಜವಾಬ್ದಾರಿಯುತ ಪತ್ರಿಕಾ ತತ್ವಗಳನ್ನು ಎತ್ತಿಹಿಡಿಯಬಹುದು ಎಂದು ಹೇಳಿದರು.
ಶ್ರೀಲಂಕಾದ ಹಿರಿಯ ಪತ್ರಕರ್ತೆ ಪತುಮ್ ತಿಲಂಕಾ ವಿಕ್ರಮ ಸಿಂಗೇ ಮಾತನಾಡಿ, ಡಿಜಿಟಲ್ ಪ್ಲಾಟ್ ಫಾರ್ಮ್‌ಗಳು ಕಾಮೆಂಟ್‌ಗಳ ವಿಭಾಗಗಳು, ಲೈವ್ ಚಾಟ್‌ಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ತೊಡಗಿಸಿಕೊಳ್ಳುವಿಕೆಯಂತಹ ಸಂವಾದಾತ್ಮಕ ವೈಶಿಷ್ಟ್ಯಗಳ ಮೂಲಕ ತಮ್ಮ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಪತ್ರಕರ್ತರನ್ನು ಸಕ್ರಿಯಗೊಳಿಸಿವೆ.
ಈ ದ್ವಿಮುಖ ಸಂವಹನವು ಸಮುದಾಯದ ಪ್ರಜ್ಞೆಯನ್ನು ಬೆಳೆಸುತ್ತದೆ ಮತ್ತು ಮಾಧ್ಯಮ ಉದ್ಯಮದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಪ್ರೋತ್ಸಾಹಿಸುತ್ತದೆ ಎಂದರು.
ನಿರಂತರವಾಗಿ ವಿಕಸನಗೊಳ್ಳುತ್ತಿರುವ ಈ ಡಿಜಿಟಲ್ ಲ್ಯಾಂಡ್‌ಸ್ಕೇಪ್ ನ್ನು ನಾವು ಪತ್ರಕರ್ತರು ಪತ್ರಿಕೋದ್ಯಮದ ಪ್ರಮುಖ ತತ್ವಗಳನ್ನು ಎತ್ತಿಹಿಡಿಯುವಲ್ಲಿ ಜಾಗರೂಕರಾಗಿರಲು ಇದು ನಿರ್ಣಾಯಕವಾಗಿದೆ. ನಿಖರತೆ, ನ್ಯಾಯೋಚಿತತೆ ಮತ್ತು ನಿಷ್ಪಕ್ಷಪಾತ, ಪರಿಕರಗಳು ಮತ್ತು ತಂತ್ರಜ್ಞಾನಗಳು ಬದಲಾಗಬಹುದಾದರೂ, ಸಾರ್ವಜನಿಕ ಹಿತಾಸಕ್ತಿಗೆ ಸೇವೆ ಸಲ್ಲಿಸುವ ನಮ್ಮ ಬದ್ಧತೆ ಅಚಲವಾಗಿ ಉಳಿಯುತ್ತದೆ ಎಂದು ಕಿವಿಮಾತು ಹೇಳಿದರು.
ಪತ್ರಿಕೋದ್ಯಮದ ಮೇಲೆ ಡಿಜಿಟಲ್ ಮಾಧ್ಯಮದ ಪ್ರಭಾವವನ್ನು ನಿರಾಕರಿಸಲು ಸಾಧ್ಯವಿಲ್ಲದ ಸ್ಥಿತಿ ಇದೆ. ಉದ್ಯಮದ ಭವಿಷ್ಯಕ್ಕಾಗಿ ಸವಾಲುಗಳು ಮತ್ತು ಅವಕಾಶಗಳೆರಡನ್ನೂ ಪ್ರಸ್ತುತಪಡಿಸುವ ಮೂಲಕ ಸುದ್ದಿ ಮಾಡುವ, ವಿತರಿಸುವ ಮತ್ತು ಅದರ ಬಳಕೆದಾರನಾಗುವ ರೀತಿಯಲ್ಲಿ ಕ್ರಾಂತಿ ಮಾಡಿದೆ. ಪತ್ರಕರ್ತರಾದ ನಾವು ಈ ಡಿಜಿಟಲ್ ಕ್ರಾಂತಿಯನ್ನು ಆಶಾವಾದ ಮತ್ತು ಸಮಗ್ರತೆಯಿಂದ ಸ್ವೀಕರಿಸೋಣ, ಸಮಾಜದಲ್ಲಿ ನಮ್ಮ ಪಾತ್ರವು ಎಂದಿಗೂ ಹೆಚ್ಚು ಮಹತ್ವ ಕಳೆದುಕೊಂಡಿಲ್ಲ ಎಂದು ಸಲಹೆ ನೀಡಿದರು.
ಶ್ರೀಲಂಕಾದ ಪತ್ರಕರ್ತರಾದ ಎಂ.ಆರ್.ಪಿ. ಶುಭಾ ಮೆನಕೆ ರತ್ನಾಯಕೆ ಮಾತನಾಡಿ, ನಾವು ಶ್ರೀಲಂಕದವರು ನಿಮ್ಮನ್ನು ಎಂದಿಗೂ ಭಾರತದಿಂದ ಬೇರೆಯಾಗಿ ಭಾವಿಸುವುದಿಲ್ಲ. ನಮ್ಮ ದೇಶ ಭಾರತವೆಂಬ ನದಿಯ ಒಂದು ಉಪನದಿಯಾಗಿದೆ. ನಮ್ಮ ಸಾಂಸ್ಕೃತಿಕ ಹಿನ್ನೆಲೆಗಳು, ಭಾಷೆ, ಹವಾಮಾನ, ಸಂಸ್ಕೃತಿಯಲ್ಲಿ ಸಾಮ್ಯತೆಗಳಿವೆ. ಹೀಗಾಗಿ ಇಲ್ಲಿಗೆ ಆಗಮಿಸುವುದು ಬಹಳ ಆಪ್ತ ಎನ್ನಿಸುತ್ತದೆ ಎಂದರು. ಭಾರತೀಯ ಸಂಸ್ಕೃತಿ ಹಾಗೂ ಹಿಂದಿ ಸಾಹಿತ್ಯ ನನಗೆ ಪ್ರೇರಣೆಯಾಗಿದೆ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ವಿ. ಶಿವಾನಂದ ತಗಡೂರು ಮಾತನಾಡಿ, ದೂರದ ಶ್ರೀಲಂಕಾ, ನೇಪಾಳದಿಂದ ಅತಿಥಿಗಳು ಬಂದಿದ್ದಾರೆ. ಶ್ರವಣಬೆಳಗೊಳದಲ್ಲಿ ನಡೆದ ಸಮ್ಮೇಳನದಲ್ಲಿ ೪೦ಕ್ಕೂ ಹೆಚ್ಚು ಪತ್ರಕರ್ತರು ಬಂದಿದ್ದರು. ಆಗ ಶ್ರೀಲಂಕಾದೊಂದಿಗೆ ಬಾಂಧವ್ಯ ಬೆಸೆಯುವ ಕೆಲಸ ಆಗಿತ್ತು. ಮದನಗೌಡ ಅವರು ಹೊರ ದೇಶಗಳಲ್ಲೂ ಬಾಂಧವ್ಯ ಬೆಳೆಸಿದ್ದಾರೆ. ೧೯೯೩ರಲ್ಲಿ ಡಿ.ವಿ. ಗುಂಡಪ್ಪ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವನ್ನು ಸ್ಥಾಪಿಸಿದರು.
ಇಂತಹ ಸಂಘಟನೆ ಪತ್ರಕರ್ತರ ವಿಶ್ವಾಸ, ವೃತ್ತಿ ಕೌಶಲ ಹೆಚ್ಚಿಸುವ ಕೆಲಸ ಮಾಡುತ್ತಿದೆ. ಮನೆಯ ಅಂಗಳದ ಹೆಸರಿನಲ್ಲಿ ಹಿರಿಯ ಪತ್ರಕರ್ತರ ಮನೆಗೆ ಸಂಘವೇ ಭೇಟಿ ನೀಡಿ ಗೌರವಿಸುತ್ತಿದೆ. ಎಲ್ಲರ ಅಭಿಪ್ರಾಯ ದಾಖಲು ಮಾಡುವ ಕೆಲಸ ಮಾಡುತ್ತಿದೆ ಎಂದು ಸಂಘದ ಕಾರ್ಯಚಟುವಟಿಕೆಗಳನ್ನು ಮೆಲುಕು ಹಾಕಿದರು.
ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಎಚ್.ಬಿ. ಮದನಗೌಡ ಮಾತನಾಡಿ, ನೇಪಾಳ ಮತ್ತು ಶ್ರೀಲಂಕಾ ದೇಶಕ್ಕೆ ಭೇಟಿ ಕೊಟ್ಟು ಆರೋಗ್ಯಕರ ಚರ್ಚೆ ಮಾಡುವುದು ನಮ್ಮ ಉದ್ದೇಶವಾಗಿದೆ. ನೇಪಾಳ ದೇಶದಲ್ಲಿ ಒಟ್ಟು ಮೂರು ಕೋಟಿ ಜನಸಂಖ್ಯೆ ಇದ್ದು, ೧೬ ಸಾವಿರ ಜನ ಪತ್ರಕರ್ತರು ಇದ್ದಾರೆ. ಇವರಿಗೆ ಯಾವ ಸೌಲಭ್ಯ ಇರುವುದಿಲ್ಲ. ಇನ್ನು ಶ್ರೀಲಂಕಾದಲ್ಲಿ ಸಲ್ಪ ಪರವಾಗಿಲ್ಲ. ಕೆಲ ಸೌಲಭ್ಯಗಳು ದೊರಕುತ್ತಿದೆ ಎಂದರು. ಇದೊಂದು ಪರಿಚಯಾತ್ಮಕವಾದ ಕಾರ್ಯಕ್ರಮವಾಗಿದ್ದು, ಎಲ್ಲಾ ವಿಚಾರವನ್ನು ಚರ್ಚೆ ಮಾಡಲು ಮುಕ್ತ ಅವಕಾಶವಿದೆ ಎಂದರು.
ಬೆಂಗಳೂರಿನ ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ ಮಾತನಾಡಿ, ಈ ಹಿಂದೆ ಪತ್ರಿಕೋದ್ಯಮವನ್ನು ಕಾವಲು ನಾಯಿ ಎಂದು ಕರೆಯುತ್ತಿದ್ದರು. ಈಗ ಅದು ಸಾಕು ನಾಯಿ ಆಗಿದೆ ಎಂದು ಹೇಳುವ ಮಟ್ಟಿಗೆ ಕ್ಷೇತ್ರದ ಗುಣಮಟ್ಟ ಕುಸಿದಿದೆ ಎಂದು ವಿಜಯವಾಣಿ ಪತ್ರಿಕೆ ಸುದ್ದಿ ಸಂಪಾದಕ, ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ ಬೇಸರ ವ್ಯಕ್ತಪಡಿಸಿದರು.
ಯಾವುದೇ ಒಬ್ಬ ವ್ಯಕ್ತಿ, ಸಂಸ್ಥೆಯ ಗುಣಗಾನ ಮಾಡುತ್ತಾ ಕೂರುವುದರಿಂದ ನಾವು ಪತ್ರಿಕೋದ್ಯಮವನ್ನು ಹಿಂದಿನ ವೈಭವದ ದಿನಗಳಿಗೆ ಕೊಂಡೊಯ್ಯಲು ಸಾಧ್ಯವಿಲ್ಲ ಎಂದರು.
ಮಾಧ್ಯಮ ಸಂಸ್ಥೆಗಳ ನಿರ್ವಹಣಾ ವೆಚ್ಚದ ಹೊರೆ, ಅದಕ್ಕಾಗಿ ಆರ್ಥಿಕ ಸಂಪನ್ಮೂಲ ಸಂಗ್ರಹಿಸುವ ಸವಾಲುಗಳಿಂದ ಪತ್ರಿಕೋದ್ಯಮದ ಗುಣಮಟ್ಟ ಹಾಗೂ ವಿಶ್ವಾಸಾರ್ಹತೆಗೆ ಧಕ್ಕೆ ತಂದೊಡ್ಡುತ್ತಿದೆ ಎಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಳ್ಳುಗೋಪಾಲ್ ಅಧ್ಯಕ್ಷತೆ ನುಡಿಯಲ್ಲಿ ಮಾತನಾಡಿ, ಕರ್ನಾಟಕದಿಂದ ನಾವು ಎಲ್ಲೆ ಹೋದರೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಊರೆಂದು ಹೇಳುತ್ತಾರೆ. ಯಾವುದೇ ಕೆಲಸವನ್ನು ಸಂತೋಷವಾಗಿ ಮಾಡಬೇಕು. ನಮ್ಮದೆಯಾದ ಚಿಂತೆ ಮತ್ತು ವ್ಯವಸ್ಥೆಗಳನ್ನು ನಾವುಗಳೆಲ್ಲಾ ಒಗ್ಗಟ್ಟಾಗಿ ಹತ್ತಿರ ಇರುವ ಮೂರು ಜಿಲ್ಲೆಯವರು ಸೇರಿ ಮಾತನಾಡಿ ಪರಿಚಯ ಮಾಡಿಕೊಂಡು ಏನಾದರೂ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು.
ಈ ನಿಟ್ಟಿನಲ್ಲಿ ಮೂರು ಜಿಲ್ಲೆಗಳ ಸೇರಿ ಈ ಮಿಲನ ಸಮಾರಂಭ ಕಾರ್ಯಕ್ರಮವನ್ನು ನಡೆಸಲಾಗಿದೆ ಎಂದು ತಮ್ಮ ಅಭಿಪ್ರಾಯ ಹೇಳಿಕೊಂಡರು.
ಕಾರ್ಯಕ್ರಮದಲ್ಲಿ ಇತ್ತಿಚಿಗೆ ಪ್ರಶಸ್ತಿಗೆ ಬಾಜನರಾಗಿದ್ದ ಹೆತ್ತೂರ್ ನಾಗರಾಜ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಶ್ರೀಲಂಕಾದಿಂದ ಆಗಮಿಸಿದ್ದ ಪತ್ರಕರ್ತರಾದ ಪತುಂತಿಲಂಕಾ ವಿಕ್ರಮ ರತ್ನೆ, ಎಂ.ಆರ್. ಪಿ. ಶುಭಾ ಮೆನಕೆ ರತ್ನಾಯಕೆ ಹಾಗೂ ನೇಪಾಳದ ಹಿರಿಯ ಪತ್ರಕರ್ತೆ ಸಮ್ಜಾನಾ ಪೌಡಲ್ ಅವರ ಭಾರತದ ಬಗೆಗಿನ ಭಾವನಾತ್ಮಕ ಮಾತುಗಳು ಭಾಷೆ, ದೇಶಗಳ ಬೇಲಿ ಗಡಿದಾಟಿ ಬಾಂಧವ್ಯ ಬೆಸೆಯಿತು.
ಇದೆ ವೇಳೆ ರಾಜ್ಯ ಸಮಿತಿ ವಿಶೇಷ ಆಹ್ವಾನಿತ ರವಿನಾಕಲಗೂಡು, ಸಂಪಾದಕರ ಸಂಘದ ಅಧ್ಯಕ್ಷ ಕೆಂಚೇಗೌಡ, ರಾಷ್ಟ್ರೀಯ ಮಂಡಳಿ ಸದಸ್ಯ ಜಿ. ಪ್ರಕಾಶ್, ರಾಷ್ಟ್ರೀಯ ಮಂಡಳಿ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಆರ್.ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಕೆ.ಎಚ್. ವೇಣುಕುಮಾರ್, ಎನ್. ನಂಜುಂಡೇಗೌಡ, ಖಜಾಂಚಿ ಕುಮಾರ್, ಪ್ರಧಾನ ಕಾರ್ಯದರ್ಶಿ ಮಂಜು ಬನವಾಸೆ, ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎಸ್.ಎ. ಮೊದಲಿಯಾರ್, ಶ್ರವಣಬೆಳಗೊಳದ ಹಿರಿಯ ಪತ್ರಕರ್ತ ಎಸ್.ಎನ್. ಅಶೋಕ್ ಕುಮಾರ್ ಇತರರು ಉಪಸ್ಥಿತರಿದ್ದರು.