
ಸಕಲೇಶಪುರ:-ನೈಸರ್ಗಿಕ ಕೃಷಿ ಎಂಬುವುದು ಕೃಷಿಯು ರಾಸಾಯನಿಕ ಮುಕ್ತ ಅಥವಾ ಸಾಂಪ್ರದಾಯಿಕ ಕೃಷಿ ವಿಧಾನವಾಗಿದೆ.ರೈತರು ನೈಸರ್ಗಿಕ ಕೃಷಿಗೆ ಒತ್ತು ಕೊಡುವುದರಿಂದ ಕಡಿಮೆ ಬಂಡವಾಳದಿಂದ ಹೆಚ್ಚು ಆದಾಯ ಪಡೆಯಬಹುದು ಎಂದು ಹಾಸನ ಜಿಲ್ಲೆಯ ಕಂದಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಶಿವಶಂಕರ ಹೇಳಿದರು.
ಕುರಭತ್ತೂರು ಗ್ರಾಮ ಪಂಚಾಯಿತಿಯ ಕುವೆಂಪು ಸಭಾಂಗಣದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಕಂದಲಿ ಐ. ಸಿ. ಎ. ಆರ್ ಕೃಷಿ ವಿಜ್ಞಾನ ಕೇಂದ್ರ,ಕೃಷಿ, ಹಾಸನದ ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗಳು ಹಾಗೂ ಎನ್.ಆರ್.ಎಲ್.ಎಂ. ಇವರ ಸಹಯೋಗದೊಂದಿಗೆ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹಾಸನ ಜಿಲ್ಲೆಯ ಕಂದಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಶಿವಶಂಕರ ಕಾರ್ಯಕ್ರಮದಲ್ಲಿ ಮಾತನಾಡಿ ನೈಸರ್ಗಿಕ ಕೃಷಿಯನ್ನು ರೈತರು ಅಳವಡಿಸಿಕೊಳ್ಳುವುದರಿಂದ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಂಡು ಉತ್ತಮವಾದ ಬೆಳೆಯನ್ನು ಬೆಳೆಯುವುದರ ಜೊತೆಗೆ ಮುಂದಿನ ತಲೆಮಾರಿಗೆ ಉತ್ತಮ ಭೂಮಿಯನ್ನು ಹಸ್ತಾಂತರಿಸಬಹುದು.
ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಈ ತರದ ಕಾರ್ಯಕ್ರಮದಲ್ಲಿ ಕೃಷಿಗೆ ಸಂಬಂಧಪಟ್ಟ ತಂತ್ರಜ್ಞಾನಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸವಾಗುತ್ತಿದೆ. ಇಂತಹ ಕಾರ್ಯಕ್ರಮದ ಪ್ರಯೋಜನ ಪಡೆದು ರೈತರು ಆರ್ಥಿಕವಾಗಿ ಸದೃಢ ಆಗಬೇಕು ಹಾಗೂ ನೈಸರ್ಗಿಕ ಕೃಷಿಗೆ ಒತ್ತು ಕೊಡಬೇಕು ಎಂದು ಕರೆ ನೀಡಿದರು.
ನಂತರ ಮಾತನಾಡಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಾದ ಸತೀಶ್ ಗೌಡ ಮಾತನಾಡಿ ರೈತರಿಗೆ ಕೃಷಿ ಎಷ್ಟು ಮುಖ್ಯ ಅಷ್ಟೆ ಹೈನುಗಾರಿಕೆ ಕೂಡ ಆದಾಯ ತಂದುಕೊಡುವ ಉದ್ಯಮ ಆಗಿದೆ. ಹಸು ಸಾಕಾಣಿಕೆ, ಕುರಿ,ಕೋಳಿ,ಹಾಗೂ ಹಂದಿ ಸಾಕಾಣಿಕೆಯಿಂದ ರೈತರು ಉತ್ತಮವಾದ ಆದಾಯವನ್ನು ಪಡೆಯಬಹುದು. ಹಸುಗಳಿಗೆ ಬರುವ ಚರ್ಮರೋಗ ಹಾಗೂ ಸಿಡುಬು ರೋಗಕ್ಕೆ ಸರ್ಕಾರದಿಂದ ಉಚಿತ ಲಸಿಕೆ ಲಭ್ಯವಿದ್ದು ಇದನ್ನು ಹೈನುಗಾರಿಕೆ ಮಾಡುವ ಎಲ್ಲಾ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅಲ್ಲದೆ ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ದೊಡ್ಡಮಟ್ಟದಲ್ಲಿ ಹೈನುಗಾರಿಕೆಯನ್ನು ಮಾಡಿ ಮಾದರಿ ರೈತರಾಗುವ ಇಚ್ಚಿಸುವವರಿಗೆ ಸರ್ಕಾರದಿಂದ 50 %ಅನುದಾನವನ್ನು ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕೃಷಿ ಅಧಿಕಾರಿ ಕೇಶವಮೂರ್ತಿ ಮಾತನಾಡಿ ಇತ್ತೀಚೆಗೆ ಸರ್ಕಾರದಿಂದ ರೈತರಿಗೆ ಉತ್ತಮ ಗುಣಮಟ್ಟ ಬಿತ್ತನೆ ಬೀಜದ ಸೌಲಭ್ಯ ಸಿಗುತ್ತಿದೆ ಹಾಗೂ ಸಮಗ್ರ ಕೃಷಿ ಪದ್ದತಿಗೆ ಆಸಕ್ತಿ ಇರುವವರು ಕೃಷಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಮಾದರಿ ರೈತರಾಗುವ ಅವಕಾಶ ಇದೆ.ನೈಸರ್ಗಿಕ ಕೃಷಿ ಗೆ ವಳಲಹಳ್ಳಿ ಗ್ರಾಮಪಂಚಾಯಿತಿ ಆಯ್ಕೆ ಮಾಡಿಕೊಳ್ಳಲಾಗಿದೆ. 2025-26 ಸಾಲಿನಲ್ಲಿ ಹೆತ್ತೂರು ಮತ್ತು ಯಸಳೂರು ಹೋಬಳಿಯಲ್ಲಿ ರೈತರಿಗೆ ಸಕಾಲಕ್ಕೆ ಕೃಷಿ ಇಲಾಖೆ ವತಿಯಿಂದ ರೈತ ಸಂಪರ್ಕ ಕೇಂದ್ರ ಹೆತ್ತೂರು ಮತ್ತು ಯಸಳೂರಿನಲ್ಲಿ ತುಂಗಾ , ಇಂಟನ್ ,ಆರ್.ಎನ್ ಆರ್, ತನು ,ಐ ಆರ್ 64 ಸೇರಿದಂತೆ ಭತ್ತದ ವಿವಿಧ ತಳಿಗಳು ಲಭ್ಯವಿದೆ. ರೈತರು ಆಗಸ್ಟ್ 31 ನೇ ತಾರೀಕಿನ ವರೆಗೂ ಈ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಹೇಳಿದರು.
ಸಕಲೇಶಪುರ ಕಾಫಿ ಮಂಡಳಿ ಕಿರಿಯ ಸಂಪರ್ಕ ಅಧಿಕಾರಿ ರಂಜಿತ್ ಮಾತನಾಡುತ್ತಾ ” ಕಡಿಮೆ ಭೂಮಿಯಲ್ಲಿ ಅಧಿಕ ಇಳುವರಿ ತೆಗೆಯುವುದರಲ್ಲಿ ಮಣ್ಣಿನ ಪರೀಕ್ಷೆ ಅಧಿಕ ಮುಖ್ಯ. ಪ್ರತಿಯೊಬ್ಬ ರೈತರು ಮಣ್ಣಿನ ಪರೀಕ್ಷೆ ಮಾಡಿಸಿ ಮಣ್ಣಿಗೆ ಬೇಕಾಗುವ ಪೋಷಕಾಂಶಗಳನ್ನು ಮಣ್ಣಿಗೆ ಸೇರಿಸುವ ಕೆಲಸ ಮಾಡಿಸಬೇಕು. ಪ್ರತಿ 3 ವರ್ಸಕ್ಕೊಮ್ಮೆ ಮಣ್ಣು ಪರೀಕ್ಷೆ ಮುಖ್ಯ. ಪ್ರಸ್ತುತ ಕಾಫಿಗೆ ಬೇಡಿಕೆ ಬಂದಿದ್ದು. ಯು. ಡಿ. ಎಲ್.ಆರ್ ಮೂಲಕ ಕಾಫಿಯನ್ನು ಬೆಳೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟ ಹಾಗೂ ಬೆಲೆಯನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಕುರಭತ್ತೂರು ಗ್ರಾಮಪಂಚಾಯಿತಿಯಲ್ಲಿ ” ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ ನೆಡೆಯಲು ಕಾರಣಕರ್ತರದ ಕೃಷಿ ಅಧಿಕಾರಿ ಕೇಶವ ಮೂರ್ತಿ ಹಾಗೂ ಕುರಭತ್ತೂರು ಗ್ರಾಮ ಪಂಚಾಯಿತಿಯ ಬೆಳೆಗಾರರ ಸಂಘಕ್ಕೆ ರೈತರಿಂದ ಪ್ರಸಂಸೆ ವ್ಯಕ್ತವಾಯಿತು.
ಹೆಚ್ಚಿನ ರೈತರು ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
ವೇದಿಕೆಯಲ್ಲಿ ಕುರಭತ್ತೂರು ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಅಧ್ಯಕ್ಷರಾದ ದರ್ಶನ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧರ್ಮಪ್ಪ, ಸಕಲೇಶಪುರ ಕಾಫಿ ಮಂಡಳಿ ಕಿರಿಯ ಸಂಪರ್ಕ ಅಧಿಕಾರಿ ಶ್ವೇತಾ,ಎಚ್. ಡಿ.ಪಿ. ಎ. ಮಾಜಿ ಸಂಘಟನಾ ಕಾರ್ಯದರ್ಶಿ ಕೆ.ಪಿ ಕೃಷ್ಣೇಗೌಡ,ಗ್ರಾಮ ಪಂಚಾಯಿ ಸದಸ್ಯರಾದ ಅರ್ಜುನ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ.ಟಿ ಕಿರಣ್, ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಗೌರವ ಅಧ್ಯಕ್ಷರಾದ ರಮೇಶ್ ಹಾಗೂ ಉಪಾಧ್ಯಕ್ಷರಾದ ರುದ್ರೇಶ್ ಉಪಸ್ಥಿತರಿದ್ದರು.





