ಚನ್ನರಾಯಪಟ್ಟಣ. ಶೆಟ್ಟಿಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ಶೆಟ್ಟಳಮ್ಮ ದೇವಿಯ ರಥೋತ್ಸವ ಅದ್ದೂರಿಯಾಗಿ ಜರುಗಿತು. ಮುಂಜಾನೆಯಿಂದಲೇ ಗರ್ಭಗುಡಿಯಲ್ಲಿ ಸುಪ್ರಭಾತ ಪುಣ್ಯಹ ಅಭಿಷೇಕ ನೆರವೇರಿತು.
ರಥ ಸಂಪ್ರೋಕ್ಷಣೆ ನಂತರ ದೇವಸ್ಥಾನದ ನಾಲ್ಕು ದಿಕ್ಕುಗಳಲ್ಲಿ ಪೂಜೆ ಸಲ್ಲಿಸಿ ಅಮ್ಮನ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಲಾಯಿತು.ನಂತರ ಗೊನೆ ತುಂಬಿದ ಬಾಳೆ ಕಂಬನೆಟ್ಟು, ಬಲಿಕೂಳು ಹಾಕಿ ಕದಳಿ ಛೇದನ ಮಾಡಿದ ನಂತರ ಜಯಗೋಷದೊಂದಿಗೆ ಹಣ್ಣು ಜವನ ಎಸೆದು ರಥವನ್ನು ದೇವಸ್ಥಾನದ ಸುತ್ತ ಎಳೆಯಲಾಯಿತು.
ಶಾಸಕ ಸಿ.ಎನ್. ಬಾಲಕೃಷ್ಣ ದೇವಿಗೆ ಪೂಜೆ ಸಲ್ಲಿಸಿ ರಥೋತ್ಸವದಲ್ಲಿ ಪಾಲ್ಗೊಂಡು ದೇವಿಯ ಕೃಪೆಯಿಂದ ಮಳೆ ಬಿದ್ದು ಬರಗಾಲ ನೀಗಲಿ ಬೆಳೆಯಾಗಲಿ ಎಂದು ತಿಳಿಸಿದರು.
ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಮಳೆ ಬಿದ್ದಿದ್ದರಿಂದ ಅನ್ನಸಂತರ್ಪಣೆ ಮಾಡುವಾಗ ಅಡಚಣೆ ಉಂಟಾಯಿತು. ಆದರೂ ಕೂಡ ಸಾವಧಾನದಿಂದ ಮಳೆಯ ನಡುವೆಯೇ ಭಕ್ತರು ಪ್ರಸಾದ ಸೇವಿಸಿದರು.
ಸುತ್ತಮುತ್ತಲ ಗ್ರಾಮಗಳಾದ ಜೋಗಿಪುರ, ನಂದಿಪುರ, ವಳಗೆರೆ ಸೋಮನಹಳ್ಳಿ, ಚಕ್ಕೋನಹಳ್ಳಿ, ಕುರುಬರ ಕಾಳೇನಹಳ್ಳಿ, ಚಾಮುಡಿಹಳ್ಳಿ ಗ್ರಾಮದ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು.
ಸಂಜೆ ಉತ್ಸವ ಮೂರ್ತಿಗಳನ್ನು ಗ್ರಾಮಕ್ಕೆ ತಂದು ಪೂಜೆ ಸಲ್ಲಿಸಿ ನಂತರ ಕೆಲವು ಮನೆಗಳಲ್ಲಿ ತಳುಗೆ ಅರ್ಪಿಸಿದ ನಂತರ ರಾತ್ರಿಪೂರ್ತಿ ಉತ್ಸವ ಏರ್ಪಡಿಸಲಾಗಿದೆ.
ವೀರಭದ್ರ ಕುಣಿತ ಹಮ್ಮಿಕೊಂಡಿದ್ದು ನಂತರ ಸೋಮನ ಕುಣಿತ ನಡೆಸಲಾಗುತ್ತದೆ.