ವಿಧಾನಸೌಧದ ಬಾಗಿಲಿಗೆ ಗೋಮೂತ್ರ ಸಿಂಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು: ಜಾಲತಾಣಗಳಲ್ಲಿ ತೀವ್ರ ಆಕ್ರೋಶ.ಇಂದು ನೂತನ ಸರ್ಕಾರದ ರಚನೆಯ ನಂತರ ಮೊದಲ HB ವಿಧಾನಸಭಾ ಅಧಿವೇಶನ ನಡೆಯುತ್ತಿದೆ. ಅದಕ್ಕೂ ಮೊದಲು ಕಾಂಗ್ರೆಸ್ ಕಾರ್ಯಕರ್ತರು ವಿಧಾನಸೌಧದ ಬಾಗಿಲಿಗೆ ಗೋಮೂತ್ರ ಸಿಂಪಡಿಸುವ ಮೂಲಕ 40% ಕಮಿಷನ್ ಸರ್ಕಾರದ ಪಾಪ ತೊಳೆಯುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.ಇಂದು ಬೆಳಿಗ್ಗೆಯೇ ಪೂಜಾರಿಯೊಬ್ಬರು ಗೋ ಮೂತ್ರ ಸಿಂಪಡಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ನಿಮಗೂ ಬಿಜೆಪಿ ಸರ್ಕಾರಕ್ಕೂ ಏನು ವ್ಯತ್ಯಾಸ? ಇಷ್ಟು ದಿನ ಗೋ ಮೂತ್ರ ಟೀಕಿಸಿದ್ದೇಕೆ ಎಂದು ಹಲವರು ಕಿಡಿಕಾರಿದ್ದಾರೆ.ಇವ್ಯಾವೋ ಗೋಮೂತ್ರ ಹಾಕಿದ್ರೆ ಪರಿಶುದ್ಧ ಆಗುತ್ತಾ? ಬ್ರಾಹ್ಮಣ್ಯ ತಾಂಡವವಾಡುತ್ತಿದೆ ಈ ಪೆದ್ದರ ತಲೆಯೊಳಗೆ. ಸರಿಯಾಗಿ ಆಡಳಿತ ಮಾಡಬೇಕು. ಆಗಲೇ ಭ್ರಷ್ಟಾಚಾರ ಮಟ್ಟ ಹಾಕೋಕೆ ಸಾಧ್ಯ. ಹೋಮ ಹವನ ಮಾಡಿಸಿ ಚುನಾವಣೆಗೆ ನಿಂತೋರು ಎಷ್ಟೋ ಜನ ಮಣ್ಣು ಮುಕ್ಕಿದ್ದಾರೆ. ಅಮಾವಾಸ್ಯೆ ದಿನ ನಾಮಪತ್ರ ಸಲ್ಲಿಸಿ ಗೆದ್ದೋರು ಇದ್ದಾರೆ, ಬುದ್ದಿ ಕಲೀರೋ ದಡ್ಡರ.. ಎಂದು ರಾಜು ಎಸ್ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ಕಾರ್ಯಕರ್ತರು ಜೀವನ ಪೂರ್ತಿ ಬಿಜೆಪಿಯವರಿಗೆ ಗೋ ಮೂತ್ರ ಗೋ ಮೂತ್ರ ಅಂತ ಅಣಕಿಸ್ಕೊಂಡು ಇದ್ದರು. ಪಾಪ ಈಗ ಅವರೆ ಗೋ ಮೂತ್ರ ಸಿಂಪಡಿಸುತ್ತಿದ್ದಾರೆ ಎಂದು ಪ್ರತಾಪ್ ಕಣಗಲ್ ವ್ಯಂಗ್ಯವಾಡಿದ್ದಾರೆ.ಇದು ಸೆಕ್ಯುಲರ್ ಗೋಮೂತ್ರ. ಹಾಗಾಗಿ ಅದು ಎಲ್ಲರಿಗೂ ಸಮ್ಮತವಾಗುತ್ತದೆ ಎಂದು ಸ್ಮಿತ ಎಂಬುವವರು ವ್ಯಂಗ್ಯದ ಟ್ವೀಟ್ ಮಾಡಿದ್ದಾರೆ.ಕಾಂಗ್ರೆಸ್ ಕೂಡ ಗೋ ಮೂತ್ರ ಬಳಸುತ್ತಿದೆ. ಬಿಜೆಪಿಗೆ ದೂರಬೇಡಿ ಎಂದು ಅರ್ಜುನ್ ಟ್ವೀಟ್ ಮಾಡಿದ್ದಾರೆ.