ಅರಸೀಕೆರೆ : ಶರನ್ನವರಾತ್ರಿ ಪ್ರಯುಕ್ತ ಪಟ್ಟಣದ ಮಾರುತಿ ನಗರದಲ್ಲಿ ವಾಸವಾಗಿರುವ ಶಕುಂತಳಾಆನಂದ ರವರ ಮನೆಯಲ್ಲಿ ದಸರಾ ಬೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿಟ್ಟಿದ್ದಾರೆ.
ರಾಜಾ ಪ್ರತ್ಯಕ್ಷ ದೇವತಾ ಎಂಬ ಮಾತಿನಂತೆ ಚಂದಣದ ಪಟ್ಟದ ಬೊಂಬೆಗೆ ರಾಜ ರಾಣಿಯರಂತೆ ಅಲಂಕರಿಸಿ ಅಗ್ರಸ್ಥಾನದಲ್ಲಿ ಮಂಟಪ ನಿರ್ಮಿಸಿ ಅದರಲ್ಲಿ ಪ್ರತಿಷ್ಟಾಪಿಸಿದ್ದಾರೆ.
ನಂತರದ ಸಾಲುಗಳಲ್ಲಿ, ದಶಾವತಾರ, ನವದುರ್ಗೆಯರು, ಅಷ್ಟಲಕ್ಷ್ಮಿ, ಶ್ರೀಕೃಷ್ಣಾವತಾರ, ಕಾಳಿಂಗ ಮರ್ದನ, ಶ್ರೀರಾಮ ಪಟ್ಟಾಭಿಷೇಕ, ದಸರೆಯ ಪ್ರಮುಖ ದೇವತೆಗಳಾದ ದುರ್ಗಿ ಹಾಗೂ ಶಾರದೆಯ ವಿಗ್ರಹ, ಪುಸ್ತಕಗಳು, ವಿವಿಧ ದೇವತೆಗಳ ವಿಗ್ರಹಗಳು, ವಿವಾಹ ಮಹೋತ್ಸವ, ವಿವಿಧ ವಾದ್ಯಗಳು, ಪ್ರಾಣಿ ಪಕ್ಷಿಗಳು ಮೊದಲಾದ ಬೊಂಬೆಗಳನ್ನು ಒಪ್ಪವಾಗಿ ಜೋಡಿಸಿದ್ದಾರೆ. ಥರ್ಮೋಕೋಲ್ ನಿಂದ ನಿರ್ಮಿಸಿರುವ ಗಣೇಶನ ವಿಗ್ರಹ, ಈಶ್ವರ, ಅಂಬಾರಿ ಹೊತ್ತ ಆನೆ, ಅರ್ಜುನನಿಗೆ ಗೀತೋಪದೇಶ ಮಾಡುತ್ತಿರುವ ಕೃಷ್ಣ ಮೊದಲಾದ ಕಲಾಕೃತಿಗಳು ಆಕರ್ಶಕವಾಗಿವೆ.
ಕಳೆದ ನಾಲ್ಕು ದಶಕಗಳಿಂದ ಪ್ರತಿವರ್ಷ ನವರಾತ್ರಿಯ ಪಾಡ್ಯದ ದಿನದಿಂದಲೇ ಗೊಂಬೆಗಳನ್ನು ಪ್ರತಿಷ್ಠಾಪಿಸಿ, ಪ್ರತಿ ದಿನ ಸಂಜೆ ಗೊಂಬೆಗಳಿಗೆ ಸಾಂಪ್ರದಾಯಕ ಶೈಲಿಯಲ್ಲಿ ಆರತಿ ಬೆಳಗಿ ಪೂಜಿಸುತ್ತಾರೆ.
“ಹೈಟೆಕ್ ಸಂಸ್ಕೃತಿಯಲ್ಲಿ ಬೆಳೆಯುತ್ತಿರುವ ಇಂದಿನ ಪೀಳಿಗೆಯ ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ, ವಿಚಾರ ಮತ್ತು ಸಂಪ್ರದಾಯವನ್ನು ಪರಿಚಯಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಪ್ರತಿ ಮನೆಗಳಲ್ಲಿ ಈ ರೀತಿಯ ಆಚರಣೆಗಳನ್ನು ನಡೆಸುವುದರಿಂದ, ಸನಾತನ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ತಿಳಿಸಬಹುದು” ಎಂದು ಶಕುಂತಳ ಆನಂದ ಅವರು ತಿಳಿಸಿದರು.