ಸಕಲೇಶಪುರ : ತಾಲ್ಲೂಕಿನ ಹಾನುಬಾಳು ಗ್ರಾಮದ ಅಂಬೇಡ್ಕರ್ ಭವನದಲ್ಲಿ ಹಾನುಬಾಳು ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದಿಂದ 3 ದಿನ ನಡೆದ ‘ ಸಮುದಾಯ ವಾಸ್ತವ್ಯ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ ಶಿಕ್ಷಣದೊಂದಿಗೆ ಸಂಸ್ಕಾರ ಬಹು ಮುಖ್ಯ ಪ್ರತಿಯೊಬ್ಬ ವ್ಯಕ್ತಿಯೂ ಸೇವೆಯಲ್ಲಿ ಭಗವಂತನನ್ನು ಕಾಣುವಂತಾದಾಗ ಮಾತ್ರ ಆತ್ಮ ತೃಪ್ತಿ ಸಿಗುತ್ತದೆ ಅಂತಹ ಆತ್ಮ ತೃಪ್ತಿಯನ್ನು ಕಂಡುಕೊಳ್ಳಲು ನಿಮಗೆ ಈ ಮೂರು ದಿನಗಳ ಶಿಬಿರ ಸಹಕಾರಿಯಾಗಲಿದೆ ಎಲ್ಲವನ್ನೂ ಸರ್ಕಾರವೇ ಮಾಡಬೇಕೆನ್ನುವ ಮನೋಭಾವದಿಂದ ಹೊರಬಂದು ನಮ್ಮಿಂದ ಸಮಾಜಕ್ಕೆ ಕೊಡುಗೆ ಏನೆಂಬುದನ್ನು ಪ್ರತಿ ಕ್ಷಣ ಆಲೋಚಿಸಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಹಾನುಬಾಳು ಗ್ರಾಮ ಪಂಚಾಯತಿ ಪಿಡಿಓ ಹರೀಶ್ ರವರು ಶಿಬಿರದ ಕುರಿತಾಗಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಪ್ರತಿಯೊಬ್ಬ ವ್ಯಕ್ತಿಯೂ ಸಮಾಜ ಸೇವೆಯ ಮೂಲಕ ಸಮಾಜಕ್ಕೆ ತನ್ನದೇ ಕೊಡುಗೆಗಳನ್ನು ನೀಡಬೇಕು ಹಾಗೆಯೇ ಈ ಮೂರು ದಿನಗಳು ಹಾನುಬಾಳು ಗ್ರಾಮ ಪಂಚಾಯತಿ ವತಿಯಿಂದ ನಿಮಗೆ ಸಂಪೂರ್ಣ ಸಹಕಾರ ದೊರೆಯುತ್ತದೆಂದು ಹಾಗೂ ಪ್ರಶಿಕ್ಷಣಾರ್ಥಿಗಳಾದ ತಾವು ಕಾಲೇಜಿನಲ್ಲಿ ಒಂದೆಡೆ ಕುಳಿತರೆ, ಜ್ಞಾನಾರ್ಜನೆ ಆಗುವುದಿಲ್ಲ. ಅದರ ಬದಲಾಗಿ ಎಲ್ಲ ಪ್ರಶಿಕ್ಷಣಾರ್ಥಿಗಳು ಗ್ರಾಮಾಂತರ ಪ್ರದೇಶದಲ್ಲಿ ಆಯೋಜಿಸುವ ಇಂತಹ ‘ ಶಿಬಿರಗಳಲ್ಲಿ ಭಾಗವಹಿಸಿ, ಆ ಪ್ರದೇಶದ ಜನರ, ನೋವು ನಲಿವುಗಳ ಕುರಿತು ಚಿಂತನೆ ನಡೆಸಿದಾಗ, ಏಕಾಗ್ರತೆ ಜತೆಗೆ ಜಾಗೃತಿ ಮೂಡಲಿದೆ ಎಂದರು.ಶಿಬಿರಾಧಿಕಾರಿಗಳಾದ ಮಂಜುನಾಥ ಆರ್ ರವರು ಮಾತನಾಡುತ್ತಾ ಯುವಪೀಳಿಗೆ ಮಹಾತ್ಮಗಾಂಧಿ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ರವರ ಅಪೇಕ್ಷೆಯಂತೆ ಗ್ರಾಮ ರಾಜ್ಯದಿಂದ ರಾಮರಾಜ್ಯ ನಿರ್ಮಾಣ ಪರಿಕಲ್ಪನೆ ಸಾಧ್ಯ ಹಾಗೂ ಅದೆಲ್ಲದಕ್ಕೂ ಮುಖ್ಯ ಗ್ರಾಮದ ಸ್ವಚ್ಚತೆ ಹಾಗಾಗಿ ನಾವೆಲ್ಲರೂ ಮೂರು ದಿನದ ಈ ಶಿಬಿರದಲ್ಲಿ ಸ್ವಚ್ಚತೆಗೆ ಮೊದಲ ಆಧ್ಯತೆ ನೀಡುವ ಮೂಲಕ ಶಿಬಿರವನ್ನು ಯಶಸ್ವಿಯಾಗಿಸೋಣ ಎಂದು ತಿಳಿಸಿದರು.ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ನಂಜುಂಡಪ್ಪ ಎಸ್ ರವರು ಮಾತನಾಡುತ್ತಾ ಹಾನುಬಾಳು ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ನಡೆಯುತ್ತಿರುವ ಶಿಬಿರವು ಅತ್ಯಂತ ಯಶಸ್ವಿಯಾಗಿ ನಡೆಯಲಿ ಹಾಗೂ ಎಲ್ಲರಲ್ಲೂ ಸೇವೆ, ಸ್ನೇಹ, ಸೌಹಾರ್ದ, ಸಹಕಾರ ಮನೋಭಾವ ಬೆಳೆಸುವಲ್ಲಿ ಈ ಶಿಬಿರ ಸಹಕಾರಿಯಾಗಲಿ ಎಂದು ತಿಳಿಸಿದರು.ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿದ ಹಾನುಬಾಳು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೆ.ಆರ್ ಸಂತೋಷ್ ರವರು ಮಾತನಾಡುತ್ತಾ, ಪಂಚಾಯತಿ ಅಧ್ಯಕ್ಷನಾಗಿ ನನ್ನ ಉದ್ದೇಶ ಹಾಗೂ ಶಿಬಿರ ಯಶಸ್ವಿಗೊಳಿಸುವಲ್ಲಿರುವ ನಿಮ್ಮ ಆಲೋಚನೆ ಎರಡೂ ಒಂದೇ ಅದುವೇ ಸೇವೆಯೊಂದಿಗೆ ಗ್ರಾಮದ ಸ್ವಚ್ಚತೆ ಕಾಪಾಡುವುದು ಈ ಶಿಬಿರದ ಮೂಲಕ ನಮ್ಮೆಲ್ಲರ ಕನಸು ಈಡೇರಲಿ ಎಂದು ತಿಳಿಸಿದರು.ಉದ್ಘಾಟನಾ ಸಂದರ್ಭದಲ್ಲಿ ಹಾನುಬಾಳು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೆ.ಆರ್ ಸಂತೋಣ್, ಪಿಡಿಓ ಹರೀಶ್, ಮಾಜಿ ಸದಸ್ಯರಾದ ಕುಸುಮ ಭೂಪಾಲ್, ಗ್ರಾಮ ಪಂಚಾಯತಿ ಸದಸ್ಯರಾದ ಸೋಮಶೇಖರ್,ಮೋಹನ್ ಕುಮಾರ್, ಶ್ರೀಮತಿ ಪ್ರತಿಮಾ ಹಾಗೂ ಪ್ರಾಂಶುಪಾಲರಾದ ಡಾ. ನಂಜುಂಡಪ್ಪ ಎಸ್, ಶಿಬಿರಾಧಿಕಾರಿ ಮಂಜುನಾಥ ಆರ್, ಸಹಾಯಕ ಪ್ರಾಧ್ಯಾಪಕರಾದ ಡಾ. ವಿಕ್ರಮ್ ಸಿ.ಬಿ, ಡಾ. ಪ್ರಭುಸ್ವಾಮಿ, ಕಂಪ್ಯೂಟರ್ ನಿರ್ವಾಹಕರಾದ ತಮ್ಮಯ್ಯ ಹೆಚ್.ಬಿ, ಟೆಕ್ನಿಷೀಯನ್ ಮಹೇಶ್ ಹಾಜರಿದ್ದರು.