ಬೇಲೂರು : ಶಿಕ್ಷಕರ ಪರಿಶ್ರಮ, ಪೋಷಕರ ಸಹಕಾರ, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ(ಎಸ್‌ಡಿಎಂಸಿ) ಪದಾಧಿಕಾರಿಗಳ ಜವಾಬ್ದಾರಿಗೆ ದಿ ಬೆಸ್ಟ್ ಎಸ್‌ಡಿಎಂಸಿ ಎಂಬ ಹಿರಿಮೆ ಜೊತೆ ೧ ಲಕ್ಷ ರೂ. ಮೊತ್ತದ ಬಹುಮಾನ ಬೇಲೂರು ತಾಲೂಕು ಬಿಕ್ಕೋಡು ಹೋಬಳಿಯ ತಾರೀಮರ ಸರಕಾರಿ ಪ್ರೌಢಶಾಲೆಗೆ ಲಭಿಸಿದೆ.

ಸ್ಪರ್ಧೆ ಮಾಡಬಯಸುವ ಶಾಲೆಯು ತಾವು ಕೈಗೊಂಡಿರುವ ಭೌತಿಕ ಹಾಗೂ ಶೈಕ್ಷಣಿಕಾತ್ಮಕ ಅಭಿವೃದ್ಧಿ ಅಂಶಗಳನ್ನು ಪುಷ್ಠಿ ಕಾರ‍್ಯಕ್ರಮದಡಿ ವಿದ್ಯಾವಾಹಿನಿ ಪೋರ್ಟಲ್‌ನಲ್ಲಿ ಅಪಲೋಡ್ ಮಾಡಬೇಕಾಗಿರುತ್ತದೆ. ರಾಜ್ಯ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕದಡಿ ೩೪ ಶೈಕ್ಷಣಿಕ ಜಿಲ್ಲೆಗಳ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳ ಕರ‍್ಯಚಟುವಟಿಕೆಗಳನ್ನು ಸಮೀಕ್ಷೆ ನಡೆಸಿ ತ್ರಿ ಸದಸ್ಯರನ್ನೊಳಗೊಂಡ ಸಮಿತಿ ತಾಲೂಕಿಗೊಂದರಂತೆ ಉತ್ತಮ ಸಮಿತಿಗಳನ್ನು ಆಯ್ಕೆ ಮಾಡುತ್ತದೆ. ಈ ಸಾಲಿನಲ್ಲಿ ರಾಜ್ಯಾದ್ಯಂತ ೨೦೪ ಶಾಲೆಗಳು ಈ ಪ್ರಶಸ್ತಿಗೆ ಭಾಜನವಾಗಿವೆ.

ಬ್ಲಾಕ್ ಮಟ್ಟದಲ್ಲಿ ಎಸ್‌ಡಿಎಂಸಿ ಸಂಸ್ಥೆಗಳನ್ನು ಪ್ರೋತ್ಸಾಹಿಸಿ ಸಮಿತಿ ಸಮಿತಿಗಳ ನಡುವೆ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವನೆ ಮೂಡಿಸುವುದರೊಂದಿಗೆ ಸರಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವ ಉದ್ದೇಶವನ್ನೊಳಗೊಂಡಿದೆ.

ಬೇಲೂರು ತಾಲೂಕಿನಲ್ಲಿ ೨೭೯ ಪ್ರಾಥಮಿಕ ಹಾಗೂ ೫೯ ಪ್ರೌಢಶಾಲೆಗಳು ಸೇರಿ ಒಟ್ಟು ೩೩೮ ಶಾಲೆಗಳಿವೆ. ಇಷ್ಟು ಶಾಲೆಗಳ ನಡುವೆ ಪೈಪೋಟಿ ನಡೆಸಿದ ತಾರೀಮರ ಪ್ರೌಢಶಾಲೆ ದಿ ಬೆಸ್ಟ್ ಎಸ್‌ಡಿಎಂಸಿ ಕಮಿಟಿ ಎಂಬ ಪ್ರಶಸ್ತಿಯನ್ನು ಪಡೆದಿದೆ.

ಈ ವೇಳೆ ಮುಖ್ಯಶಿಕ್ಷಕ ಕರಿಬಸಪ್ಪ ಮಾತನಾಡಿ, “ಎಸ್‌ಡಿಎಂಸಿ ಸಮಿತಿ ಅಧ್ಯಕ್ಷ ಶಿವಕುಮಾರ್ ಸಿ.ಆರ್. ರವರನ್ನೊಳಗೊಂಡಂತೆ ೧೦ ಪದಾಧಿಕಾರಿಗಳ ಹಾಗೂ ಶಿಕ್ಷಕರ ಸಹಕಾರದಿಂದ ೩.೫ ಎಕರೆ ವಿಸ್ತೀರ್ಣವನ್ನು ಹೊಂದಿರುವ ಶಾಲೆಯ ಆವರಣದೊಳಗೆ ನಾನಾ ಜಾತೀಯ ಸುಮಾರು ೬೦೦ ಸಸಿಗಳನ್ನು ನೆಡಲಾಗಿದೆ.ಬೇಸಿಗೆಯಲ್ಲಿ ಗಿಡಗಳು ಬಾಡಿಹೋಗುವುದನ್ನು ತಪ್ಪಿಸಲು ಪ್ರತಿ ಗಿಡಕ್ಕೂ ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ. ಶ್ರೀ ಅನ್ನಪೂರ್ಣೇಶ್ವರಿ ಅನ್ನ ದಾಸೋಹ ಭವನವನ್ನು ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳು ಒಟ್ಟಿಗೆ ಕುಳಿತು ಊಟ ಮಾಡುವ ವ್ಯವಸ್ಥೆ ಮಾಡಲಾಗಿದೆ.

ಶಾಲೆಗೆ ಬಣ್ಣ, ಹೈಟೆಕ್ ಶೌಚಾಲಯ ನಿರ್ಮಾಣ, ಶಾಲೆಯ ಸುತ್ತ ಶಾಸಕರ ಅನುದಾನದಲ್ಲಿ ಕಾಂಪೌಂಡ್ ನಿರ್ಮಾಣ, ವೇದಿಕೆ ನಿರ್ಮಾಣ, ಪ್ರತಿ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ, ನೂತನ ಯೋಜನೆಗಳ ರೂಪುರೇಷೆ ಹೀಗೆ ನಾನಾ ಕಾರ‍್ಯಗಳಲ್ಲಿ ಮುಖ್ಯಶಿಕ್ಷರಿಗೆ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಸಾಥ್ ನೀಡುತ್ತಿದ್ದಾರೆ. ಬಹುಮಾನದ ಮೊತ್ತವಾಗಿ ಬಂದ ೧.ಲಕ್ಷ ರೂ.ಗಳಲ್ಲಿ ಶಾಲೆಯ ಎಲ್ಲಾ ಕೋಣೆಗಳಿಗೆ ಫ್ಯಾನ್, ಸಮರ್ಪಕ ಬೆಳಕಿನ ವ್ಯವಸ್ಥೆಗೆ ಆದ್ಯತೆ ಕೊಟ್ಟು ಉಳಿದ ಹಣವನ್ನು ಶಾಲೆಯ ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಗುವುದು.ಬಿ.ಇ.ಒ ರಾಜೇಗೌಡ ಸರ್ ಹಾಗೂ ಶಾಲಾ ದತ್ತು ಅಧಿಕಾರಿ ಶಿವಮರಿಯಪ್ಪರವರ ಮಾರ್ಗದರ್ಶನ ಅನನ್ಯವಾಗಿದೆ ಎಂದರು.

ಎಸ್ ಡಿ ಎಂ ಸಿ ಅಧ್ಯಕ್ಷ ಶಿವಕುಮಾರ್ ಸಿ.ಆರ್ ಮಾತನಾಡಿ “ಶಾಲೆಯ ಅಭಿವೃದ್ಧಿಗಾಗಿ ಹಗಲಿರುಳು ಸೇವೆ ಸಲ್ಲಿಸುತ್ತಾ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡುತ್ತಿರುವ ಶಿಕ್ಷಕರ ಆಸಕ್ತಿ, ಪೋಷಕರ ಹಾಗೂ ಸಮಿತಿ ಪದಾಧಿಕಾರಿಗಳ ಸಹಕಾರದಿಂದ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು ಇನ್ನಷ್ಟು ಅಭಿವೃದ್ಧಿ ಮಾಡಲು ಪ್ರೋತ್ಸಾಹ ಸಿಕ್ಕಂತಾಗಿದೆ. ಈ ನಿಟ್ಟಿನಲ್ಲಿ ಶಾಸಕರ ಆಪ್ತ ದರ್ಶನ್ ಬಿಳಗುಲಿಯವರ ಪಾತ್ರ ಅವಿಸ್ಮರಣೀಯವಾಗಿದೆ ಎಂದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed