
ಹಾಸನ : ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಡಿ ಬಡ ಕುಟುಂಬಗಳಿಗೆ ಉಚಿತವಾಗಿ ವಿತರಿಸಲಾಗುವ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನು ಶ್ರೀರಾಮ ಸೇನೆ ನೀಡಿದ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸುಮಾರು 85 ಚೀಲ ಅಕ್ಕಿ ಹಾಗೂ ಪಿಕಪ್ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುವ ಘಟನೆ ಹಾಸನ ತಾಲ್ಲೂಕಿನ ಶಾಂತಿಗ್ರಾಮ ಹೋಬಳಿಯಲ್ಲಿ ನಡೆದಿದೆ.
ಇದೇ ವೇಳೆ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಧರ್ಮನಾಯಕ್ ಮಾತನಾಡಿ, ಮಾಹಿತಿ ಮೆರೆಗೆ ಶ್ರೀರಾಮಸೇನೆಯು ವಾಹನವನ್ನು ಹಾಸನದಿಂದ ಹಿಂಬಾಲಿಸಲಾಯಿತು.
ಶಾಂತಿಗ್ರಾಮದ ಸೈಬರ್ಡ್ ಹೋಟೆಲ್ ಸಮೀಪ ಕೆಎ-೧೩ ಡಿ-೫೮೯೫ ಸಂಖ್ಯೆಯ ಟಾಟಾ ಇಂಟರ್ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಟವನ್ನು ನೆನ್ನೆ ಗುರುವಾರ ಸಂಜೆ ತಡೆ ಮಾಡಿದರು.
ಈ ಬಗ್ಗೆ ಕರೆ ಮಾಡಿದ ಹಿನ್ನಲೆಯಲ್ಲಿ ಆಹಾರ ನಿರೀಕ್ಷಕರು, ತಾಲೂಕು ಆಹಾರ ಶಿರಸ್ತೇದಾರ್ ಹಾಗೂ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ವಾಹನವನ್ನು ಪರಿಶೀಲಿಸಿದರು.
ಪರಿಶೀಲನೆಯ ವೇಳೆ ವಾಹನದಲ್ಲಿ ಸುಮಾರು ೫೦ ಕೆಜಿ ತೂಕದ ೮೫ ಚೀಲಗಳಷ್ಟು ಬಿಳಿ ಹಾಗೂ ಹಳದಿ ಬಣ್ಣದ ಅಕ್ಕಿ ಪತ್ತೆಯಾಗಿದೆ.
ಅಕ್ಕಿಯನ್ನು ಪರಿಶೀಲಿಸಿದ ಅಧಿಕಾರಿಗಳು, ಅದು ಸರ್ಕಾರದ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ವಿತರಿಸುವ ಅನ್ನಭಾಗ್ಯ ಅಕ್ಕಿಯಂತೆಯೇ ಮೇಲ್ನೋಟಕ್ಕೆ ಕಂಡುಬಂದಿದ್ದು, ಅದರಲ್ಲಿ ಸಾರವರ್ಧಕ ಅಕ್ಕಿಯ ಮಿಶ್ರಣವೂ ಇರುವ ಲಕ್ಷಣಗಳು ಕಂಡುಬಂದಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದರು.
ಸ್ಥಳದಲ್ಲಿದ್ದ ವಾಹನ ಚಾಲಕ ತನ್ನ ಹೆಸರನ್ನು ಸಯ್ಯದ್ ಸೂಚಿಯಾನ್ ಬಿನ್ ಸಯ್ಯದ್ ನಯಾಜ್, ಹಾಸನ ನಗರದ ಪೆನ್ಶನ್ ಮೊಹಲ್ಲಾ ನಿವಾಸಿ ಎಂದು ತಿಳಿಸಿದ್ದಾನೆ. ಆದರೆ, ಸಾಗಿಸುತ್ತಿದ್ದ ಅಕ್ಕಿಗೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆ, ಪರವಾನಗಿ ಅಥವಾ ಮಾಲೀಕತ್ವದ ದಾಖಲೆಗಳನ್ನು ಅಧಿಕಾರಿಗಳ ಮುಂದೆ ಹಾಜರುಪಡಿಸಲು ಸಾಧ್ಯವಾಗಿಲ್ಲ. ಅಲ್ಲದೆ, ಅಕ್ಕಿಯ ಮಾಲೀಕರು ಅಥವಾ ವಾರಸುದಾರರು ಸ್ಥಳದಲ್ಲಿರಲಿಲ್ಲ ಎಂದು ತಿಳಿದುಬಂದಿದೆ ಎಂದರು.
ಅಧಿಕಾರಿಗಳು ವಶಪಡಿಸಿಕೊಂಡ ಅಕ್ಕಿಯ ಒಟ್ಟು ಮೌಲ್ಯ ಸುಮಾರು ೧.೫೦ ಲಕ್ಷ ಎಂದು ಅಂದಾಜಿಸಲಾಗಿದೆ.
ಸರ್ಕಾರಿ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಣೆ ಮಾಡಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ವಾಹನ, ಅಕ್ಕಿ ಹಾಗೂ ಇತರೆ ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಲಾಗಿದೆ ಎಂದು ಹೇಳಿದರು.
ಈ ಸಂಬಂಧ ಅಗತ್ಯ ವಸ್ತುಗಳ ಕಾಯ್ದೆ-೧೯೫೫ರ ಕಲಂ ೩ ಮತ್ತು ೭, ಹಾಗೂ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣ) ಆದೇಶ-೨೦೧೬ರ ನಿಯಮ ೧೮ರಡಿ ವಾಹನ ಚಾಲಕ, ವಾಹನದ ಮಾಲೀಕ ಹಾಗೂ ಅಕ್ಕಿಯ ವಾರಸುದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಅಕ್ಕಿ ಎಲ್ಲಿಂದ ಸಂಗ್ರಹಿಸಲಾಯಿತು, ಯಾರಿಗೆ ಸಾಗಿಸಲಾಗುತ್ತಿತ್ತು ಹಾಗೂ ಇದರ ಹಿಂದೆ ಸಂಘಟಿತ ಜಾಲವಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಕ್ಕಿಯನ್ನು ದುರ್ಬಳಕೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದ್ದು, ಇಂತಹ ಅಕ್ರಮಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡುವಂತೆ ಮನವಿ ಎಂದರು.
ಈ ಸಂದರ್ಭದಲ್ಲಿ ಶ್ರಿರಾಮಸೇನೆ ಸಹಕಾರ್ಯದರ್ಶಿ ರಮೇಶ್ ಇತರರು ಉಪಸ್ಥಿತರಿದ್ದರು.
