
ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳೆಗಾರರ ಸಂಘದ 18ನೇ ಮಾಸಿಕ ಸಭೆ ಶುಕ್ರವಾರ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷರಾದ ವಿ.ಪಿ. ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳೆಗಾರರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸ್ಥಳೀಯವಾಗಿ ಬ್ಯಾಂಕ್ ಶಾಖೆ ಸ್ಥಾಪಿಸುವ ಕುರಿತು ಮಹತ್ವದ ಚರ್ಚೆ ನಡೆಯಿತು.
ಬ್ಯಾಂಕಿಂಗ್ ಸೇವೆಗಳಿಗಾಗಿ ಈ ಭಾಗದ ಜನರು ದೂರದ ಪ್ರದೇಶಗಳಿಗೆ ತೆರಳಬೇಕಾದ ಪರಿಸ್ಥಿತಿ ಎದುರಾಗಿದ್ದು, ಇದರಿಂದ ಸಮಯ ಮತ್ತು ಹಣದ ವ್ಯಯವಾಗುತ್ತಿದೆ. ಆದ್ದರಿಂದ ವಳಲಹಳ್ಳಿ ಭಾಗದಲ್ಲಿ ಬ್ಯಾಂಕ್ ಶಾಖೆ ಆರಂಭಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರದೇಶದಲ್ಲಿ ಕಚೇರಿ ಹಾಗೂ ಸಾರ್ವಜನಿಕ ಕೆಲಸಗಳು ಹೆಚ್ಚಾಗುತ್ತಿದ್ದು, ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಹಲವು ತೊಂದರೆಗಳು ಉಂಟಾಗುತ್ತಿರುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ವಿ.ಪಿ. ವಿಶ್ವನಾಥ್ ಅವರು, “ಬೆಳೆಗಾರರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು–ಅರಕಲಗೂಡು ಮಾರ್ಗವಾಗಿ ಮಂಗಳೂರು ತಲುಪುವ ನೇರ ಬಸ್ ಸೇವೆ ಅಗತ್ಯವಾಗಿದೆ.
ಈ ಸಂಬಂಧ ಬೆಳೆಗಾರರ ಸಂಘ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಬಸ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
“ಸಂಘದ ಸ್ವಂತ ಕಚೇರಿ ನಿರ್ಮಾಣ ಮಾಡುವ ಉದ್ದೇಶವಿದ್ದು, ಅದಕ್ಕಾಗಿ ಸೂಕ್ತ ಸ್ಥಳ ಪಡೆದು ಆದಷ್ಟು ಬೇಗ ಕಚೇರಿ ನಿರ್ಮಾಣ ಮಾಡುವ ಆಶಯ ಹೊಂದಿದ್ದೇನೆ. ಇದಕ್ಕೆ ಸಂಘದ ಎಲ್ಲಾ ಸದಸ್ಯರ ಸಹಕಾರ ಅಗತ್ಯ” ಎಂದು ತಿಳಿಸಿದರು.
ಸಭೆಯಲ್ಲಿ ಎಚ್.ಡಿ.ಪಿ.ಎ ನಿರ್ದೇಶಕರಾದ ಸುಬ್ಬಣ್ಣ ಗೌಡ, ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಉಪಾಧ್ಯಕ್ಷರಾದ ರುದ್ರೇಶ್, ಖಜಾಂಚಿ ಹೂವಣ್ಣ ಗೌಡ, ಕಾರ್ಯದರ್ಶಿ ಅರುಣ್ ಗೌಡ ಕರಡಿಗಾಲ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
