ಸಕಲೇಶಪುರ: ಹವಾಮಾನ ವೈಪರೀತ್ಯ ಹಾಗೂ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಎಲ್ಲ ರೈತರು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ತಮ್ಮ ಬೆಳೆಗಳಿಗೆ ಜುಲೈ 31ರೊಳಗೆ ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳಬೇಕು ಎಂದು ಶಾಸಕ ಸಿಮೆಂಟ್ ಮಂಜು ಮನವಿ ಮಾಡಿದರು.

ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಏರ್ಪಡಿಸಿದ್ದ ಫಸಲ್ ಭೀಮಾ ಯೋಜನೆ ಕುರಿತು ಅರಿವು ಮೂಡಿಸುವ ಜಾಗೃತಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಕೃತಿ ವಿಕೋಪ, ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ವಿವಿಧ ಕಾರಣಗಳಿಂದ ಬೆಳೆ ಹಾನಿಯಾದರೆ ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಆಲೂರು ಹಾಗೂ ಕಟ್ಟಾಯ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಅಡಿಕೆ, ಕಾಳುಮೆಣಸು, ಭತ್ತ, ಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಯೋಜನೆಯಡಿ ವಿಮಾ ಸೌಲಭ್ಯ ಲಭ್ಯವಿದೆ. ಬೆಳೆ ಹಾನಿಯ ಪ್ರಮಾಣಕ್ಕೆ ಅನುಗುಣವಾಗಿ ರೈತರಿಗೆ ಪರಿಹಾರ ದೊರೆಯಲಿದ್ದು, ಅಡಿಕೆಗೆ ಸುಮಾರು ₹1.60 ಲಕ್ಷ, ಕಾಳುಮೆಣಸಿಗೆ ₹47 ಸಾವಿರ, ಭತ್ತಕ್ಕೆ ₹75 ಸಾವಿರದವರೆಗೆ ಹಾಗೂ ಜೋಳಕ್ಕೆ ₹44 ಸಾವಿರದವರೆಗೆ ವಿಮಾ ರಕ್ಷಣೆ ದೊರೆಯುತ್ತದೆ ಎಂದು ತಿಳಿಸಿದರು.

ಈ ವರ್ಷ ಮುಂಗಾರು ಮಳೆ ಶೇ.40ಕ್ಕೂ ಅಧಿಕ ಪ್ರಮಾಣದಲ್ಲಿ ಕೊರತೆಯಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಇಂತಹ ಸಂದರ್ಭದಲ್ಲಿ ಬೆಳೆಗಳನ್ನು ರಕ್ಷಿಸಿಕೊಳ್ಳಲು ವಿಮೆ ಅತ್ಯಂತ ಅಗತ್ಯವಾಗಿದ್ದು, ಪ್ರತಿಯೊಬ್ಬ ರೈತರೂ ಜುಲೈ 31ರೊಳಗೆ ವಿಮಾ ಕಂತು ಪಾವತಿಸಿ ಯೋಜನೆಯ ವ್ಯಾಪ್ತಿಗೆ ಬರಬೇಕು ಎಂದು ಮನವಿ ಮಾಡಿದರು.ಯೋಜನೆಯಡಿ ವಿವಿಧ ಬೆಳೆಗಳಿಗೆ ನಿಗದಿತ ಪ್ರೀಮಿಯಂ ಪಾವತಿಸಿ ಹೆಚ್ಚಿನ ಮೊತ್ತದ ವಿಮಾ ರಕ್ಷಣೆ ಪಡೆಯಲು ಅವಕಾಶವಿದೆ. ರೈತರು ತಮ್ಮ ಬೆಳೆಗೆ ಅನ್ವಯವಾಗುವ ಪ್ರೀಮಿಯಂ ಹಾಗೂ ವಿಮಾ ಮೊತ್ತದ ಕುರಿತು ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ತಕ್ಷಣವೇ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶೇಷ ಪ್ರಚಾರ ವಾಹನ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ರೈತರಿಗೆ ಯೋಜನೆಯ ಮಾಹಿತಿ ನೀಡಲಿದೆ. ಯಾವುದೇ ರೈತರು ಈ ಅವಕಾಶವನ್ನು ಕೈಚೆಲ್ಲದೆ ಫಸಲ್ ಭೀಮಾ ಯೋಜನೆಯ ಪ್ರಯೋಜನ ಪಡೆದು ತಮ್ಮ ಕೃಷಿಗೆ ಆರ್ಥಿಕ ಭದ್ರತೆ ಒದಗಿಸಿಕೊಳ್ಳಬೇಕು ಎಂದು ಶಾಸಕ ಸಿಮೆಂಟ್ ಮಂಜು ಕರೆ ನೀಡಿದರು.

ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಭಾಕರ್ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಕೃಷಿಕರು,ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *