ಮೇ10ರಂದು ಒಂದೇ ಹಂತದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ : ಮೇ 13ರಂದು ಫಲಿತಾಂಶ
ಮೇ10ರಂದು ಒಂದೇ ಹಂತದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ : ಮೇ 13ರಂದು ಫಲಿತಾಂಶ
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿರುವ ಕೇಂದ್ರ ಚುನಾವಣಾ ಆಯೋಗ, ಮೇ. 10ರಂದು ಚುನಾವಣೆ ನಡೆಯಲಿದೆ ಎಂದು ತಿಳಿಸಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಒಂದೇ ಹಂತದಲ್ಲಿ ಕರ್ನಾಟಕದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಕರ್ನಾಟಕದಲ್ಲಿ ಮೇ. 10ರಂದು ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಒಂದೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೇ.13ರಂದು ಫಲಿತಾಂಶ ಘೋಷಣೆಯಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಯ ಪ್ರಕ್ರಿಯೆ ಇಂತಿದೆ:
ಏಪ್ರಿಲ್ 13-ಅಧಿಸೂಚನೆ ಪ್ರಕಟಣೆ.
ಏಪ್ರಿಲ್ 20-ನಾಮಪತ್ರ ಸಲ್ಲಿಕೆ.
ಏಪ್ರಿಲ್ 21-ನಾಮಪತ್ರ ಪರಿಶೀಲನೆ.
ಏಪ್ರಿಲ್ 24-ನಾಮಪತ್ರ ಹಿಂಪಡೆಯಲು ಕೊನೆಯ ದಿನ.
ಮೇ 10- ಮತದಾನ.
ಮೇ 13-ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆ.
ಕರ್ನಾಟಕದಲ್ಲಿ 5.22 ಕೋಟಿ ಮತದಾರಿದ್ದು, ಈ ಪೈಕಿ 2.62 ಕೋಟಿ ಪುರುಷ ಮತದಾರರು ಮತ್ತು 2.59 ಕೋಟಿ ಮಹಿಳಾ ಮತದಾರರಿದ್ದಾರೆ. ಇದ್ದಾರೆ. 12,15,763 ಮತದಾರರು 80 ವರ್ಷ ಮೇಲ್ಪಟ್ಟವರಿದ್ದು, ಇವರಿಗೆ ತಮ್ಮ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ ಎಂದು ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇನ್ನು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ 9.17 ಲಕ್ಷ ಮತದಾರರು, ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. ಮತದಾನಕ್ಕಾಗಿ ರಾಜ್ಯಾದ್ಯಂತ 58,282 ಮತಗಟ್ಟೆಗಳು ಸಿದ್ಧವಾಗಿದ್ದು, ತೃತೀಯ ಲಿಂಗಿಗಳಿಗೆ ಮತ್ತು ವಿಶೇಷ ಚೇತನರಿಗೆ ವಿಶೇಷ ಬೂತ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ. ಇನ್ನು ಈ ಮತಗಟ್ಟೆಗಳ ಪೈಕಿ, 100 ಮತಗಟ್ಟೆಗಳನ್ನು ವಿಶೇಷ ಚೇತನ ಸಿಬ್ಬಂದಿ ನಿರ್ವಹಣೆ ಮಾಡಲಿದ್ದು, ಗ್ರೀನ್ ಮತ್ತು ಪಿಂಕ್(ಮಹಿಳೆಯರಿಗಾಗಿ) ಮತಗಟ್ಟೆಗಳು ಕೂಡ ಇರಲಿವೆ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.