ಹಾಸನ: ಮನೆ ಮನೆಯಲ್ಲಿ ಶ್ರೀ ಶಂಕರ ತತ್ತ್ವ ಪ್ರಸಾರ ಪ್ರತಿಷ್ಠಾನದ ವತಿಯಿಂದ ಜಗದ್ಗುರು ಶ್ರೀ ಶಂಕರ ಭಗವತ್ಪಾದರ ಜಯಂತಿ – ೨೦೨೪ರ ಅಂಗವಾಗಿ ನಡೆದ ಜಗದ್ಗುರು ಶ್ರೀ ಶಂಕರಾಚಾರ್ಯರ ಭಾವಮೂರ್ತಿಯ ಭವ್ಯ ಉತ್ಸವವು ನಾದಸ್ವರ, ಚಂಡೆ ವಾದನ, ಮಾತೆಯರ ಭಜನಾ ಕುಣಿತದೊಂದಿಗೆ ಅತ್ಯದ್ಭುತವಾಗಿ ವೈಭವೋಪೇತವಾಗಿ ಸಂಪನ್ನಗೊಂಡಿತು.
ಜಿಟಿಜಿಟಿ ಮಳೆಯಲ್ಲಿ ಮಧ್ಯಾಹ್ನ ಉತ್ಸವವು ಹಾಸನ ನಗರದ ಉತ್ತರ ಬಡಾವಣೆಯ ಮನೆ ಮನೆಯಲ್ಲಿ ಶ್ರೀ ಶಂಕರ ಸ್ಥಳದಿಂದ ಪ್ರಾರಂಭವಾಗಿ ಅರಳಿಕಟ್ಟೆ ವೃತ್ತ, ಸಹ್ಯಾದ್ರಿ ಸರ್ಕಲ್ ಹೀಗೆ ಉತ್ತರ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಂಚರಿಸಿ ನಂತರ ಸ್ವಸ್ಥಾನ ಸೇರಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಗುರುಬಂಧುಗಳು ಉತ್ಸವದಲ್ಲಿ ಚಂಡೆ ಮದ್ದಳೆಯ ವಾದನಕ್ಕೆ ಯುವಕರು ಸೇರಿದಂತೆ ಮಾತೆಯರು ಸಹ ಕುಣಿದು ಜಗದ್ಗುರುಗಳಿಗೆ ಜೈಕಾರ ಹಾಕುವ ಮೂಲಕ ತಮ್ಮ ಭಕ್ತಿ, ಉತ್ಸಾಹವನ್ನು ವ್ಯಕ್ತಪಡಿಸಿದರು.
ಶೃಂಗೇರಿ ಶ್ರೀ ಶಂಕರ ಮಠ, ಹಾಸನದ ಧರ್ಮಾಧಿಕಾರಿ ಶ್ರೀ ಶ್ರೀಕಂಠಯ್ಯನವರು ಉತ್ಸವದಲ್ಲಿ ಆಗಮಿಸಿದ್ದ ಎಲ್ಲರಿಗೂ ಬಾದಾಮಿ ಹಾಲು ನೀಡಿದರು. ಭಕ್ತಾದಿಗಳು ರಸ್ತೆಯನ್ನು ರಂಗೋಲಿಯಿಂದ ಸಿಂಗರಿಸಿ ಪೂಜೆ ಮಾಡಿಸುವ ಮೂಲಕ ಜಗದ್ಗುರುಗಳ ಕೃಪೆಗೆ ಪಾತ್ರರಾದರು.
ಉತ್ಸವದಲ್ಲಿ ಮನೆ ಮನೆಯಲ್ಲಿ ಶ್ರೀ ಶಂಕರ ಪ್ರತಿಷ್ಠಾನದ ಅಧ್ಯಕ್ಷರಾದ ಹೆಚ್.ಎಸ್. ಬಾಲಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿಗಳಾದ ಗುರುಮೂರ್ತಿ, ಉಪಾಧ್ಯಕ್ಷರಾದ ರಂಜಿನಿ ಮಂಜುನಾಥ್, ಟ್ರಸ್ಟಿಗಳಾದ ಅಡ್ವೊಕೇಟ್ ಮಂಜುನಾಥಮೂರ್ತಿ, ಟಿ.ಎಚ್. ಚಂದ್ರಶೇಖರ್, ಅಡಿಗೆ ನಾಗರಾಜ್, ಪಟ್ಟಾಭಿ ರಾಮಸ್ವಾಮಿ, ಸುಧೀಂದ್ರ,ಭವಾನಿ, ಬಾಲಕೃಷ್ಣ, ಚಂದ್ರಶೇಖರ್ ಸೇರಿದಂತೆ ಇನ್ನಿತರ ಟ್ರಸ್ಟಿಗಳು, ನೂರಾರು ಗುರುಬಂಧುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.