ಆಲೂರು :ಶ್ರೀ ಕೆಂಚಾಂಬಿಕೆಯ ವಾರ್ಷಿಕ ದೊಡ್ಡಜಾತ್ರೆ ದಿನಾಂಕ 4/5/25ರ ಭಾನುವಾರದಿಂದ 11/5/25ರ ಭಾನುವಾರದವರೆಗೆ ಆಲೂರು ತಾಲೂಕಿನ ಹರಿಹಳ್ಳಿಯಲ್ಲಿ ನಡೆಯುತ್ತಿದೆ.

ಇಂದು ಪಾದಪೂಜೆ, ಸಾರು, ವಸಂತೋತ್ಸವದ ಮೂಲಕ ಶ್ರೀ ದೇವಿಯ ಮೂಲ ದೇವಸ್ಥಾನದಿಂದ ಆರಂಭವಾಯಿತು. ಇಂದಿನಿಂದ ಮುಂದಿನ ಭಾನುವಾರದ ಪರ್ಯಂತ ಕಾರ್ಯಕ್ರಮಗಳು ನಡೆಯುತ್ತವೆ.

ಬುಧವಾರ ಪಾದತೂಗುವ ಜಾತ್ರೆ ನಡೆಯಲಿದೆ, ಅಂದು ಪಾದುಕೆಗಳನ್ನು ಉಯ್ಯಾಲೆಯಲ್ಲಿರಿಸಿ ತೂಗುವ ಪದ್ಧತಿಯಿದೆ. ನಂತರ ವಸಂತೋತ್ಸವ ನಡೆದು, ಮಹಾಮಂಗಳಾರತಿ, ಪ್ರಸಾದ ವಿನಿಯೋಗದ ನಂತರ ಅಂದಿನ ಕಾರ್ಯಕ್ರಮ ಮುಕ್ತಾಯವಾಗುತ್ತದೆ. ಶನಿವಾರ ರಾತ್ರಿ 8ಕ್ಕೆ ಮೂಲ ದೇವಸ್ಥಾನದಲ್ಲಿ ಉಧ್ವಾರ್ಚನೆ, ಸಪ್ತಮಾತೃಕಾ ಸಹಿತ ಶ್ರೀ ಕೆಂಚಾಂಬಿಕೆಗೆ ಮಹಾಪೂಜೆ, ಸುಗ್ಗಿ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯುತ್ತದೆ.

ಮರುದಿನ ಬೆಳಗ್ಗೆ ಮೂಲದೇವಸ್ಥಾನದಿಂದ ಹೊರಡುವ ದೇವಿಯ ಒಡವೆ, ಮುಖ, ಪಾದುಕೆ, ಬೆಳ್ಳಿ ಹೆಡಿಗೆ, ಪುಷ್ಪ, ಉತ್ಸವಮೂರ್ತಿಗಳ ಮೆರವಣಿಗೆ ಸಕಲೋಪಚಾರಗಳೊಂದಿಗೆ ದೇವಾಲಯಕ್ಕೆ ತಲುಪಿ, ಅಲಂಕಾರ, ಅಭಿಷೇಕ, ಪೂಜೆ, ಬಲಿಪ್ರದಾನದ ನಂತರ ಮಹಾಮಂಗಳಾರತಿ ಮಧ್ಯಾಹ್ನ 1ಕ್ಕೆ ಸಂಪನ್ನವಾಗುತ್ತದೆ. ನಂತರ 2ಕ್ಕೆ ಶ್ರೀದೇವಿ ಹಾಗೂ ವೀರಭದ್ರದೇವರ(ಭಂಟ) ಸಮಾಗಮ ಬನ್ನಿಮಂಟಪದಲ್ಲಾಗುತ್ತದೆ.

ಇಬ್ಬರೂ ಗರ್ಭಗೃಹ ಸೇರಿದ ತರುವಾಯ ಭಕ್ತಾದಿಗಳಿಗೆ ಪಾದನಮಸ್ಕಾರಕ್ಕೆ ಅವಕಾಶ ನೀಡಲಾಗುತ್ತದೆ. ರಾತ್ರಿ 10:30ರ ವರೆಗೆ ಪಾದನಮಸ್ಕಾರ ನೆರವೇರಿದ ನಂತರ ಮಂಗಳಾರತಿ, ಅಲಂಕಾರ ವಿಸರ್ಜನೆಗೊಂಡು ಮೂಲ ದೇವಸ್ಥಾನಕ್ಕೆ (ಬನ) ಶ್ರೀದೇವಿಯ ಮೆರವಣಿಗೆ ಸೇರಿದ ಬಳಿಕ ಜಾತ್ರಾ ಕಾರ್ಯಕ್ರಮಕ್ಕೆ ತೆರೆಬೀಳಲಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *