
ಅರೇಹಳ್ಳಿ: ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಮಲ್ಲಾಪುರ ಗ್ರಾಮದಲ್ಲಿ ಭೂತಪ್ಪ,ಕೆಂಚಪ್ಪ ಸ್ವಾಮಿ ೧೮ ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಶ್ರೀ ಲೋಕದಮ್ಮನವರಿಗೆ ವಿಶೇಷ ಪೂಜಾ ಕಾರ‍್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಪ್ರಧಾನ ಅರ್ಚಕ ಹಾಲಪ್ಪ ಸ್ವಾಮಿಯವರ ನೇತೃತ್ವದಲ್ಲಿ ಲೋಕ ಕಲ್ಯಾಣಕ್ಕಾಗಿ ವಸಂತ ಋತು ಚೈತ್ರ ಮಾಸದ ಶುದ್ಧ ಬಹುಳದ ಪೌರ್ಣಮಿ ಶುಭದಲ್ಲಿ ಆರಂಭವಾದ ಪೂಜೋತ್ಸವದಲ್ಲಿ ಭೂತಪ್ಪ ಸ್ವಾಮಿ ಉತ್ಸವ ಮೂರ್ತಿಗೆ ಗಂಗಾಪೂಜೆ, ಗಣಪತಿ ಪೂಜೆ, ಪಂಚಾಮೃತ ಅಭಿಷೇಕ,ಮಹಾ ರುದ್ರಾಭಿಷೇಕ, ವೀರಗಾಸೆ ನೃತ್ಯದೊಂದಿಗೆ ಮೆರವಣಿಗೆ ನಡೆಯಿತು.
ಕೆಂಚಪ್ಪ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪೂಜೆ, ವಿಶೇಷ ಹೂವಿನ ಅಲಂಕಾರ ಪೂಜೆ, ಶ್ರೀ ಲೋಕದಮ್ಮನವರಿಗೆ ವಿಶೇಷ ಪೂಜೆ ನಡೆಸಿ ಮಹಾಮಂಗಳಾರತಿ ಪೂರ್ಣಗೊಂಡ ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು.
ಮಹೇಶ್ ಶಾಸ್ತ್ರಿ ಹಾಗೂ ನಾಗರಾಜು ದೈವಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಮಲ್ಲಾಪುರ ಹಾಗೂ ಸುತ್ತ ಮುತ್ತಲಿರುವ ಗ್ರಾಮಗಳ ಭಕ್ತಾದಿಗಳು ಆಗಮಿಸಿ ಪೂಜಾ ಕಾರ‍್ಯಕ್ರಮವನ್ನು ಯಶಸ್ವಿಗೊಳಿಸಿದರು.



