
ಸಕಲೇಶಪುರ;- ಹಾಸನ ಜಿಲ್ಲಾ ಕೇರಂ ಬೋರ್ಡ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷರಾಗಿ ಹಾಗೂ ರಾಜ್ಯ ಕೇರಂ ಅಸೋಸಿಯೇಷನ್ ಸದಸ್ಯರಾಗಿ ಸಕಲೇಶಪುರ ತಾಲೂಕು ಕಾಂಗ್ರೆಸ್ ಮುಖಂಡರು, ಬೆಳಗೋಡು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರು ಹಾಗೂ ಸಮಾಜ ಸೇವಕರಾದ ನಿಸಾರ್ ಬೆಳಗೋಡ್ ಅವರು ನೂತನವಾಗಿ ನೇಮಕಗೊಂಡಿದ್ದಾರೆ.
ರಾಜ್ಯಮಟ್ಟದ ನೊಂದಾಯಿತ ಕೇರಂ ಬೋರ್ಡ್ ಅಸೋಸಿಯೇಷನ್ ಸದಸ್ಯರಾಗಿ ಜವಾಬ್ದಾರಿ ವಹಿಸಿಕೊಂಡಿರುವ ನಿಸಾರ್ ಅವರ ನೇಮಕಾತಿ ಕಾಂಗ್ರೆಸ್ ಕಾರ್ಯಕರ್ತರು, ಕೇರಂ ಆಟಾರರುಹಾಗೂ ಬೆಳಗೂಡು ನಿವಾಸಿಗಳು ಹಾಗೂ ಅಭಿಮಾನಿ ವಲಯದಲ್ಲಿ ಸಂತೋಷದ ವಾತಾವರಣವನ್ನು ಮೂಡಿಸಿದೆ. ವಿವಿಧ ಕ್ಷೇತ್ರಗಳ ಗಣ್ಯರು ಅವರಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿಸಾರ್ ಬೆಳಗೋಡ್ ಅವರು, “ಕೇರಂ ಕೇವಲ ಆಟವಲ್ಲ, ಅದು ಒಂದು ತಪಸ್ಸಿನಂತೆ. ಆಟಗಾರರಲ್ಲಿ ತಾಳ್ಮೆ, ಸಂಯಮ ಮತ್ತು ದೃಢತೆ ಬೆಳೆಸುವ ಶಕ್ತಿ ಈ ಆಟದಲ್ಲಿದೆ. ಇದು ಮೈಂಡ್ ಗೇಮ್ ಆಗಿದ್ದು, ಮೆದುಳಿಗೆ ಚುರುಕು ಮತ್ತು ಶಕ್ತಿ ನೀಡುತ್ತದೆ” ಎಂದು ಹೇಳಿದರು.
ಇಂದಿನ ಯುವಕರು ಕೇರಂ ಆಟದ ಮೂಲಕ ತಾಲೂಕು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ, ಎಲ್,ಐ,ಸಿ, ಆರ್,ಬಿ,ಐ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಪಡೆದು ಮಾದರಿಯಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.
ಕ್ರೀಡೆಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಮೂಲಕ ಜೀವನದಲ್ಲಿ ಉನ್ನತ ಸಾಧನೆ ಸಾಧ್ಯವೆಂಬುದನ್ನು ಯುವಜನತೆಗೆ ಅರಿವು ಮೂಡಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.ಇದಲ್ಲದೆ, ರಾಜ್ಯ ಮಟ್ಟದಲ್ಲಿ ಅಧಿಕೃತ ಲೈಸೆನ್ಸ್ ಪಡೆದು ಕೇರಂ ಸಂಘವನ್ನು ನೋಂದಾಯಿಸಿ, ಮುಂದಿನ ದಿನಗಳಲ್ಲಿ ವಿವಿಧ ಟೂರ್ನಮೆಂಟ್‌ಗಳನ್ನು ಆಯೋಜಿಸಿ ಯುವಕರು ಹಾಗೂ ಯುವತಿಯರಿಗೆ ತರಬೇತಿ ನೀಡುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಾದ್ಯಂತ ಕೇರಂ ಕ್ರೀಡೆಯನ್ನು ಉತ್ತೇಜಿಸಲು ಹಾಗೂ ಪ್ರತಿಭಾವಂತರನ್ನು ಹೊರತರುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನಿಸಾರ್ ಬೆಳಗೋಡ್ ಅವರ ಈ ನೇಮಕಾತಿಯಿಂದ ಹಾಸನ ಜಿಲ್ಲೆಯಲ್ಲಿ ಕೇರಂ ಕ್ರೀಡೆಗೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
