ಹಾಸನ: ಸಕಲೇಶಪುರ ಜೈಲಿನಿಂದ 2011ರಲ್ಲಿ ತಪ್ಪಿಸಿಕೊಂಡಿದ್ದ ವಿಚಾರಣಾಧೀನ ಖೈದಿಯನ್ನು ಹಾಸನ ಪೊಲೀಸರು ಬರೊಬ್ಬರಿ 15 ವರ್ಷಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚನ್ನಕೇಶವ @ ಕೇಶವ @ ಸುರೇಶ್ (ತಂದೆ: ಲೇಟ್ ಸಣ್ಣೇಗೌಡ), ಸಕಲೇಶಪುರ ತಾಲ್ಲೂಕಿನ ನಲ್ಲೂರು ಗ್ರಾಮದ ನಿವಾಸಿಯಾಗಿರುವ ಈ ಆರೋಪಿ, ಸಿಆರ್ ನಂ.45/2011ರಲ್ಲಿ ಐಪಿಸಿ ಸೆಕ್ಷನ್‌ಗಳಾದ 376, 307, 394 r/w 34 ಅಡಿಯಲ್ಲಿ ಬಂಧಿಯಾಗಿದ್ದನು.ಜೈಲಿನಿಂದ ಪರಾರಿಯಾದ ನಂತರ ಆರೋಪಿ ಮುಂಬೈ ಸೇರಿದಂತೆ ವಿವಿಧ ನಗರಗಳಲ್ಲಿ ತಲೆಮರೆಸಿಕೊಂಡು ಹೋಟೆಲ್‌ಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು.

ಹಲವು ವರ್ಷಗಳಿಂದ ಪೊಲೀಸರಿಗೆ ಸಿಕ್ಕದೇ ತಪ್ಪಿಸಿಕೊಂಡಿದ್ದ ಈತನ ಚಲನವಲನಗಳ ಬಗ್ಗೆ ಇತ್ತೀಚೆಗೆ ಖಚಿತ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದರು.

ಈ ಮಾಹಿತಿ ಆಧರಿಸಿ ಗೋವಾ ರಾಜ್ಯಕ್ಕೆ ತೆರಳಿದ ವಿಶೇಷ ಪೊಲೀಸ್ ತಂಡ, ಅಲ್ಲಿ ಒಂದು ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಗುರುತಿಸಿ ಬಂಧಿಸಿದೆ. ಬಳಿಕ ಕಾನೂನು ಕ್ರಮಗಳನ್ನು ಪೂರ್ಣಗೊಳಿಸಿ ಆರೋಪಿಯನ್ನು ಹಾಸನಕ್ಕೆ ಕರೆತಂದು ಮತ್ತೆ ಜೈಲಿಗೆ ಒಪ್ಪಿಸಲಾಗಿದೆ.

ಈ ಕಾರ್ಯಾಚರಣೆಯನ್ನು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕಿ ಶುಭಾನ್ವಿತಾ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ತಮ್ಮಯ್ಯ ಮತ್ತು ಶ್ರೀನಿಧಿ ಅವರ ನೇತೃತ್ವದಲ್ಲಿ ನಡೆಸಲಾಗಿದೆ.

ಸಿಬ್ಬಂದಿಗಳಾದ ರವಿ ಕಬ್ಬತ್ತಿ, ಸೋಮಶೇಖರ ಹಾಗೂ ಬಸವರಾಜು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಬಹುಕಾಲದಿಂದ ಪರಾರಿಯಾಗಿದ್ದ ಅಪರಾಧಿಯನ್ನು ಬಂಧಿಸಿರುವುದು ಪೊಲೀಸರ ಚುರುಕಿನ ಕಾರ್ಯಕ್ಷಮತೆಯನ್ನು ತೋರಿಸುತ್ತದೆ ಎಂದು ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed