
ಬೇಲೂರು. ಜೂನ್ 25: ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ. ಗಿರೀಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ .
ಈ ಬಗ್ಗೆ ಚುನಾವಣಾಧಿಕಾರಿ ಗುರುಮೂರ್ತಿ ಮಾತನಾಡಿ, ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕೇವಲ ಒಂದು ನಾಮಪತ್ರ ಮಾತ್ರ ಸಲ್ಲಿಕೆಯಾಗಿದ್ದರಿಂದ ಬೇಲೂರಿನ ಬಿ. ಗಿರೀಶ್ ಅವರನ್ನು ಅವಿರೋಧವಾಗಿ ಆಯ್ಕೆಯಾದವರಾಗಿ ಘೋಷಿಸಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಬಿ. ಗಿರೀಶ್, ತಮ್ಮನ್ನು 6ನೇ ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಿದ ಆಡಳಿತ ಮಂಡಳಿಯ ಎಲ್ಲಾ ಚುನಾಯಿತ ನಿರ್ದೇಶಕರಿಗೆ ಹಾಗೂ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಸಂಘದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಅವರು, ಈ ಹಿಂದೆ 45 ಗ್ರಾಮಗಳನ್ನು ಒಳಗೊಂಡಿದ್ದ ಸಂಘವು ವಿಕೇಂದ್ರೀಕರಣದ ನಂತರ ಚಿಕ್ಕಮೇದೂರು ಹಾಗೂ ಚಿನ್ನೇನಹಳ್ಳಿ ಸಂಘಗಳು ಪ್ರತ್ಯೇಕಗೊಂಡ ಪರಿಣಾಮ ಪ್ರಸ್ತುತ ಬೇಲೂರು ಪಟ್ಟಣ ಸೇರಿದಂತೆ 16 ಗ್ರಾಮಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸಂಘದಲ್ಲಿ 1,112 ಶೇರುದಾರರಿದ್ದು, ಸುಮಾರು ₹7.18 ಕೋಟಿ ಮೊತ್ತದ ವಿವಿಧ ಸಾಲ ಸೌಲಭ್ಯಗಳನ್ನು ಸದಸ್ಯರಿಗೆ ಒದಗಿಸಲಾಗಿದೆ. ರೈತರ ಹಿತದೃಷ್ಟಿಯಿಂದ ಶೂನ್ಯ ಬಡ್ಡಿದರದ ಕೃಷಿ ಸಾಲ, ಹೈನುಗಾರಿಕೆ ಸಾಲ, ಮಿಡ್-ಟರ್ಮ್ ಲೋನ್ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಜೊತೆಗೆ ಪಿಗಿ ಹಾಗೂ ಎಫ್‌ಡಿಗಳಿಗೆ ಆಕರ್ಷಕ ಬಡ್ಡಿದರ ನೀಡಲಾಗುತ್ತಿದೆ ಎಂದು ಹೇಳಿದರು.
ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ರೈತರಿಗೆ ಹೆಚ್ಚುವರಿಯಾಗಿ ₹10,000 ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸಂಘದ ಮೂಲಕ 1,930 ಮಂದಿ ಯಶಸ್ವಿನಿ ಯೋಜನೆಯ ಫಲಾನುಭವಿಗಳಾಗಿದ್ದು, ಪ್ರತಿವರ್ಷ 15 ರಿಂದ 18 ಮಂದಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.
ಸಂಘಕ್ಕೆ ಪ್ರಸ್ತುತ ಸ್ವಂತ ಕಟ್ಟಡವಿಲ್ಲದಿದ್ದರೂ, ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಹೊಸ ವರ್ಷದಿಂದ ಸಂಘದ ಕಾರ್ಯಚಟುವಟಿಕೆಗಳನ್ನು ಸ್ವಂತ ಕಟ್ಟಡದಲ್ಲಿ ಆರಂಭಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.
ರೈತರು ಹಾಗೂ ಸದಸ್ಯರ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಿ, ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಸಂಘವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ಭರವಸೆ ನೀಡಿದರು.
ನಂತರ ಸಂಘದ ನಿರ್ದೇಶಕ ಎಸ್. ನಾಗೇಶ್ ಮಾತನಾಡಿ, ಸಹಕಾರ ಕ್ಷೇತ್ರದ ಬಗ್ಗೆ ಗಿರೀಶ್ ಅವರು ಹೊಂದಿರುವ ಜ್ಞಾನ ಹಾಗೂ ಅನುಭವವು ಸಂಘದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಗಿರೀಶ್ ಅವರ ಅನುಭವ ಮತ್ತು ದೂರದೃಷ್ಟಿಯ ನಾಯಕತ್ವವು ಸಂಘದ ಸರ್ವತೋಮುಖ ಬೆಳವಣಿಗೆಗೆ ಶಕ್ತಿಯಾಗಲಿದ್ದು, ರೈತರು ಹಾಗೂ ಸದಸ್ಯರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಂಘವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದ್ದಾರೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಸ್.ಎ. ರಮೇಶ್, ಮಾಜಿ ಅಧ್ಯಕ್ಷೆ ಶಾರದಮ್ಮ, ನಿರ್ದೇಶಕರಾದ ಹರೀಶ್, ಶೈಲೇಶ್, ಲಕ್ಷ್ಮಮ್ಮ, ಕುಮಾರ್, ಚಂದ್ರನಾಯಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೊನ್ನೇಗೌಡ ಹಾಗೂ ಬ್ಯಾಂಕ್ ಸಿಬ್ಬಂದಿಗಳಾದ ಮೇಘನಾ, ಏಲಕ್ಕಿಗೌಡ, ಭಾಗ್ಯಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
