
ಸಕಲೇಶಪುರ : ಸುಮಾರು 30-35 ವರ್ಷಗಳಿಂದ ಸಕಲೇಶಪುರ ಪಟ್ಟಣದಲ್ಲಿ ತಿಂಡಿ ವ್ಯಾಪಾರ ನಡೆಸುತ್ತಿರುವ ಮೊಬೈಲ್ ಕ್ಯಾಂಟಿನ್ ಸಂಘದ ಸದಸ್ಯರು ತಮ್ಮ ವ್ಯಾಪಾರಕ್ಕೆ ಸಂಬಂಧಿಸಿದ ಸಮಸ್ಯೆ ಕುರಿತು ಸಕಲೇಶಪುರ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಹಿಂದೆ ಮಾಜಿ ಶಾಸಕರಾದ ಹೆಚ್.ಎಂ. ವಿಶ್ವನಾಥ್ ಹಾಗೂ ಹೆಚ್.ಕೆ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರೆತಿರಲಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ಅಂದಿನ ಜಿಲ್ಲಾಧಿಕಾರಿಗಳಾದ ಲತಾ ಕುಮಾರಿ ಅವರು ರಸ್ತೆ ಬದಿಯ ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸಿದ ಬಳಿಕ, ಹಾಲಿ ಶಾಸಕರಾದ ಸಿಮೆಂಟ್ ಮಂಜು ಅವರ ಸೂಚನೆಯಂತೆ ಪುರಸಭೆಯಿಂದ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ಬಳಿಕ ಎಸ್‌ಬಿಐ ಬ್ಯಾಂಕ್ ಮುಂಭಾಗದಲ್ಲಿ ಆಹಾರ ಮಳಿಗೆಗಳಿಗಾಗಿ ಸೂಕ್ತ ಸ್ಥಳವನ್ನು ನಿಗದಿಪಡಿಸಲಾಗಿತ್ತು.
ಆದರೆ ಕೆಲ ವ್ಯಕ್ತಿಗಳು ತಮಗೆ ನಿಗದಿಪಡಿಸಿದ ಸ್ಥಳದಲ್ಲಿ ವ್ಯಾಪಾರ ನಡೆಸಲು ತಕರಾರು ಮಾಡುತ್ತಿರುವುದರಿಂದ, ಪುರಸಭೆ ಅಧಿಕಾರಿಗಳು ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಂಡು ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮೊಬೈಲ್ ಕ್ಯಾಂಟಿನ್ ಸಂಘದ ಸದಸ್ಯರು ಮನವಿ ಮಾಡಿದ್ದಾರೆ.
