ಸಕಲೇಶಪುರ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಸಕಲೇಶಪುರ ಮತ್ತು ಆಲೂರು ತಾಲೂಕಿನಲ್ಲಿ ವಿದ್ಯುತ್ ವ್ಯವಸ್ಥೆಗೆ ವ್ಯಾಪಕ ಹಾನಿಯಾಗಿರುವ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಅವರು ಸೆಸ್ಕ್ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳ ತುರ್ತು ಸಭೆ ನಡೆಸಿ ಶೀಘ್ರ ವಿದ್ಯುತ್ ಪೂರೈಕೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬುಧುವಾರ ನಗರದ ಸೆಸ್ಕ್ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ತುರ್ತು ಸಭೆಯಲ್ಲಿ ಮಾತನಾಡಿದರು,. ಹಾನುಬಾಳು, ಹೆತ್ತೂರು, ಯಸಳೂರು ,ಬೆಳಗೋಡು ಹಾಗೂ ಕಸಬಾ ಸೇರಿದಂತೆ ಸಕಲೇಶಪುರದ ವಿವಿಧ ಹೋಬಳಿಗಳಲ್ಲಿ ಹಾಗೂ ಆಲೂರಿನ ಕಾರಗೋಡು , ಮಗ್ಗೆ, ಕುಂದೂರು ,ಕೆ.ಹೊಸಕೋಟೆ ಭಾಗಗಳಲ್ಲಿ ವಿದ್ಯುತ್ ಕಂಬಗಳು ಉರುಳಿ ಬಿದ್ದಿರುವುದರಿಂದ ಜನರು ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಚರ್ಚಿಸಲಾಯಿತು.ಸಕಲೇಶಪುರ ವ್ಯಾಪ್ತಿಯಲ್ಲಿ 219 ವಿದ್ಯುತ್ ಕಂಬಗಳು, ಆಲೂರು ತಾಲೂಕಿನಲ್ಲಿ ಸುಮಾರು 80 ಕಂಬಗಳು ಹಾನಿಗೊಳಗಾಗಿವೆ. ನಾಳೆ ಸಂಜೆ ಒಳಗೆ ಎಲ್ಲೆಡೆ ವಿದ್ಯುತ್ ಸಂಪರ್ಕ ಪುನಃಸ್ಥಾಪಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಶಾಸಕ ಮಂಜು ತಿಳಿಸಿದರು.

ಸಭೆಯಲ್ಲಿ ಸಿಬ್ಬಂದಿ ಕೊರತೆಯ ವಿಚಾರವೂ ಪ್ರಸ್ತಾಪವಾಗಿದ್ದು, ಸಕಲೇಶಪುರ ವಿಭಾಗದಲ್ಲಿ ಸುಮಾರು 80 ಸಿಬ್ಬಂದಿ ಕೊರತೆ ಇರುವ ಮಾಹಿತಿ ಲಭ್ಯವಾಗಿದೆ. ತಾತ್ಕಾಲಿಕವಾಗಿ 40 ಸಿಬ್ಬಂದಿಯನ್ನು ಸಕಲೇಶಪುರಕ್ಕೆ ಹಾಗೂ 8 ಹೆಚ್ಚುವರಿ ಸಿಬ್ಬಂದಿಯನ್ನು ಆಲೂರು ತಾಲೂಕಿನ ಮಗ್ಗೆ ಭಾಗಕ್ಕೆ ನಿಯೋಜಿಸಲು ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ. ಅಗತ್ಯವಿದ್ದರೆ ಹೊರ ತಾಲೂಕುಗಳಿಂದಲೂ ಸಿಬ್ಬಂದಿಯನ್ನು ಕರೆಸಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.

ಮಳೆಗಾಲಕ್ಕೂ ಮುನ್ನವೇ ಜಂಗಲ್ ಕ್ಲಿಯರೆನ್ಸ್ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೂ ಈ ಬಾರಿ ಬಿರುಗಾಳಿ ತೀವ್ರವಾಗಿದ್ದರಿಂದ ಮರಗಳು ವಿದ್ಯುತ್ ತಂತಿ ಹಾಗೂ ಕಂಬಗಳ ಮೇಲೆ ಬಿದ್ದು ಹೆಚ್ಚಿನ ಹಾನಿಯಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.ಸಾರ್ವಜನಿಕರಿಂದ ನಿರಂತರ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ, ರೋಗಿಗಳು, ವಿದ್ಯಾರ್ಥಿಗಳು ಹಾಗೂ ಗರ್ಭಿಣಿಯರಿಗೆ ಯಾವುದೇ ತೊಂದರೆಯಾಗದಂತೆ ತ್ವರಿತವಾಗಿ ವಿದ್ಯುತ್ ಪೂರೈಕೆ ಪುನಃಸ್ಥಾಪಿಸಬೇಕು ಎಂದು ಶಾಸಕ ಮಂಜು ಸೂಚಿಸಿದರು.

ದೂರವಾಣಿ ಕರೆಗಳಿಗೆ ಸ್ಪಂದಿಸಿಕೆಲವು ಜೆಇ ಹಾಗೂ ಲೈನ್‌ಮನ್‌ಗಳು ಸಾರ್ವಜನಿಕರ ದೂರವಾಣಿ ಕರೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಎಲ್ಲ ಅಧಿಕಾರಿಗಳು ಸಾರ್ವಜನಿಕರ ಕರೆಗಳಿಗೆ ಕಡ್ಡಾಯವಾಗಿ ಸ್ಪಂದಿಸಬೇಕು. ಕರೆ ಸ್ವೀಕರಿಸಲು ಸಾಧ್ಯವಾಗದಿದ್ದರೆ ಬಳಿಕ ಕರೆ ಮಾಡಿ ಮಾಹಿತಿ ನೀಡಬೇಕು. ಪ್ರತಿದಿನ ಎಇ ಹಾಗೂ ಜೆಇಗಳು ಸಮನ್ವಯ ಸಭೆ ನಡೆಸಿ ಸಮಸ್ಯೆಗಳ ಕುರಿತು ಚರ್ಚಿಸಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಮಂಜು ನಿರ್ದೇಶನ ನೀಡಿದರು.

ಗ್ರಾಮೀಣ ಭಾಗದ ಜನರು ಜಂಗಲ್ ಕ್ಲಿಯರೆನ್ಸ್ ಹಾಗೂ ಕಂಬ ಅಳವಡಿಕೆ ಕಾರ್ಯದಲ್ಲಿ ಸ್ವಯಂಪ್ರೇರಿತರಾಗಿ ಸಹಕರಿಸುತ್ತಿರುವುದನ್ನು ಶ್ಲಾಘಿಸಿದ ಅವರು, ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿ, ಅವರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆಯೊಂದಿಗೆ ಸೇವೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಚೆಸ್ಕಾಂ ಇಲಾಖೆಯ ಅಧಿಕ್ಷಕ ಇಂಜಿನಿಯರ್ ಸುನಿಲ್, ಕಾರ್ಯನಿರ್ವಾಹಕ ಅಭಿಯಂತ್ರರಾದ ವೆಂಕಟೇಶ್, ಹಾಸನ ವಿಭಾಗ ಅರ್ಜುನ್ ಹಾಗೂ ಕೆಪಿಟಿಎಸ ಹಾಸನ ವಿಭಾಗಾ ನ ಪ್ರಸನ್ನ ಕೆರೋಡಿ,ಸೆಸ್ಕ್ ಹಾಗೂ ಕೆಪಿಟಿಸಿಎಲ್‌ನ ಎಇ, ಜೆಇ, ಅರಣ್ಯ ಇಲಾಖೆ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed