
ಸಕಲೇಶಪುರ: ಸಕಲೇಶಪುರ ವಲಯ ಅರಣ್ಯಾಧಿಕಾರಿಗಳು ಒಂಟಿ ಕಾಡಾನೆ ಇರುವ ಹರೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.ಕಾಡಾನೆ ಸಂಚಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳ ಸುರಕ್ಷತೆಗೆ ವಿಶೇಷ ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ.
ಶಾಲೆಗೆ ತೆರಳುವ ಹಾಗೂ ಶಾಲೆಯಿಂದ ಮನೆಗೆ ಮರಳುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬಸ್‌ಗೆ ಹತ್ತಿಸಿ, ಇಳಿಸುವ ಕಾರ್ಯವನ್ನು ಕಟ್ಟುನಿಟ್ಟಾಗಿ ನಿರ್ವಹಿಸುವಂತೆ ಆರ್‌ಆರ್‌ಟಿ (Rapid Response Team) ಹಾಗೂ ಇಟಿಎಫ್ (Elephant Task Force) ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ.
ಇದೇ ವೇಳೆ ಸಾರ್ವಜನಿಕರು ಅನಗತ್ಯವಾಗಿ ಕಾಡಾನೆ ಇರುವ ಪ್ರದೇಶದತ್ತ ತೆರಳದಂತೆ, ಒಂಟಿಯಾಗಿ ತೋಟಗಳಿಗೆ ಅಥವಾ ಅರಣ್ಯ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಕಾಡಾನೆ ಚಲನವಲನದ ಕುರಿತು ಯಾವುದೇ ಮಾಹಿತಿ ದೊರೆತ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಹಾಗೂ ಇಲಾಖೆ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಗ್ರಾಮಸ್ಥರಿಗೆ ತಿಳಿಸಲಾಗಿದೆ.
ಕಾಡಾನೆ ಸುರಕ್ಷಿತವಾಗಿ ಅರಣ್ಯದತ್ತ ಮರಳುವವರೆಗೆ ಆರ್‌ಆರ್‌ಟಿ ಹಾಗೂ ಇಟಿಎಫ್ ಸಿಬ್ಬಂದಿ ಸ್ಥಳದಲ್ಲೇ ನಿಗಾ ವಹಿಸಿ, ನಿರಂತರವಾಗಿ ಕಾಡಾನೆ ಚಲನವಲನವನ್ನು ಗಮನಿಸುತ್ತಿದ್ದಾರೆ. ಸಾರ್ವಜನಿಕರ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಮುಂದುವರಿಸಲಾಗಿದೆ.
