
ಚಿಕ್ಕಮಗಳೂರು : ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ. ರವಿ, ತೀವ್ರ ವಿವಾದಾತ್ಮಕ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ? ಆತ ಬಂದು ನೀಟ್ ವಿರುದ್ಧ ಹೋರಾಟ ಮಾಡುತ್ತಾನಂತೆ ಎಂದು ಆಕ್ಷೇಪಾರ್ಹ ಮಾತುಗಳನ್ನಾಡಿದ್ದಾರೆ.
ನೀಟ್ ಅಕ್ರಮ ವಿರೋಧಿಸಿ ನಡೆಯುತ್ತಿರುವ ಹೋರಾಟವು ಶಿಕ್ಷಣ ಸುಧಾರಣೆಗಾಗಿ ನಡೆಯುತ್ತಿಲ್ಲ. ‘ಧರ್ಮೇಂದ್ರ ಪ್ರಧಾನ್ ಹಟಾವೋ, ಮೋದಿ ರಾಜೀನಾಮೆ ನೀಡಬೇಕು’ ಎಂದು ಜಪಿಸುತ್ತಿರುವ ತುಕ್ಡೆ ಗ್ಯಾಂಗ್‌ಗಳು ಇದರ ಹಿಂದೆ ಇವೆ. ಇವರಿಗೆ ವಿದ್ಯಾರ್ಥಿಗಳ ಬಗ್ಗೆ ನಿಜವಾದ ಕಾಳಜಿಯಿಲ್ಲ, ಬೇರೆ ಸ್ವಾರ್ಥ ಕಾರಣಗಳಿಗಾಗಿ ಮಾತನಾಡುತ್ತಿದ್ದಾರೆ ಎಂದು ಸಿ.ಟಿ. ರವಿ ಆರೋಪಿಸಿದರು.
ಮುಂದುವರಿದು ಮಾತನಾಡಿದ ಅವರು, ಸಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಈ ಪ್ರತಿಭಟನೆಗಳು ಶಿಕ್ಷಣ ಕ್ಷೇತ್ರದ ಹಿತದೃಷ್ಟಿಯಿಂದ ನಡೆಯುತ್ತಿಲ್ಲ. ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜಕೀಯವಾಗಿ ಗುರಿಯಾಗಿಸಿಕೊಂಡು, ವಿದ್ಯಾರ್ಥಿಗಳ ಹೆಸರಿನಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಯತ್ನ ನಡೆಯುತ್ತಿದೆ. ನೀಟ್ ಅಕ್ರಮವನ್ನು ನೆಪ ಮಾಡಿಕೊಂಡು ಸ್ಥಿರ ಸರ್ಕಾರವನ್ನು ಅಸ್ಥಿರಗೊಳಿಸುವ ಹಾಗೂ ವಿದ್ಯಾರ್ಥಿಗಳ ಮೂಲಕ ದಂಗೆ ಎಬ್ಬಿಸುವ ಷಡ್ಯಂತ್ರ ರೂಪಿಸಲಾಗಿದೆ” ಎಂದು ದೂರಿದ್ದಾರೆ.
ಸಿ.ಟಿ. ರವಿ ಅವರ ಈ ಆಕ್ಷೇಪಾರ್ಹ ಹೇಳಿಕೆಗೆ ವಿದ್ಯಾರ್ಥಿ ಸಂಘಟನೆಗಳು ಹಾಗೂ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
