
ಹಾಸನ : RAWEP ಕಾರ್ಯಕ್ರಮದ ಅಂಗವಾಗಿ ಗ್ರಾಮದ ದೇವಸ್ಥಾನದ ಬಳಿ “ಔಷಧಿ ಬೆಳೆಗಾಗಿ – ಸುರಕ್ಷತೆ ನಮ್ಮಗಾಗಿ” ಎಂಬ ವಿಷಯದ ಕುರಿತು ಕೀಟನಾಶಕ ಮತ್ತು ಕಳೆನಾಶಕಗಳ ಸುರಕ್ಷಿತ ಬಳಕೆಯ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ರೈತರಿಗೆ ಕೀಟನಾಶಕ ಮತ್ತು ಕಳೆನಾಶಕಗಳನ್ನು ಬಳಸುವ ಮೊದಲು ಹಾಗೂ ಸಿಂಪಡಿಸುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಎರಡು ಕುಟುಂಬಗಳ ಕಥೆಯ ಮೂಲಕ ಹಾಸ್ಯ ಮತ್ತು ಸಂದೇಶವನ್ನು ಒಳಗೊಂಡ ಸ್ಕಿಟ್ ಪ್ರದರ್ಶಿಸಲಾಯಿತು.
ಒಂದು ಕುಟುಂಬ ಸುರಕ್ಷತಾ ಕಿಟ್ ಬಳಸಿ ಸರಿಯಾದ ಕ್ರಮಗಳನ್ನು ಅನುಸರಿಸುವುದನ್ನು ಹಾಗೂ ಮತ್ತೊಂದು ಕುಟುಂಬ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸುವುದರಿಂದ ಎದುರಾಗಬಹುದಾದ ಅಪಾಯಗಳನ್ನು ಸ್ಕಿಟ್ ಮೂಲಕ ತೋರಿಸಲಾಯಿತು.
ಸುರಕ್ಷತಾ ಕಿಟ್‌ನಲ್ಲಿ ಕೈಗವಸು, ಮಾಸ್ಕ್/ಉಸಿರಾಟದ ರಕ್ಷಕ, ಕಣ್ಣಿನ ರಕ್ಷಕ, ರಕ್ಷಣಾತ್ಮಕ ಉಡುಪು ಮತ್ತು ಬೂಟು ಮುಂತಾದವುಗಳ ಬಳಕೆಯನ್ನು ಪ್ರದರ್ಶಿಸಲಾಯಿತು.
ಕೀಟನಾಶಕದ ಲೇಬಲ್ ಓದುವುದು, ಶಿಫಾರಸು ಮಾಡಿದ ಪ್ರಮಾಣದಲ್ಲಿಯೇ ಬಳಸುವುದು, ಗಾಳಿಯ ದಿಕ್ಕನ್ನು ಗಮನಿಸುವುದು, ಸಿಂಪಡಣೆ ಸಂದರ್ಭದಲ್ಲಿ ಆಹಾರ ಸೇವನೆ ಮತ್ತು ಧೂಮಪಾನ ಮಾಡದಿರುವುದು ಹಾಗೂ ಮಕ್ಕಳು ಮತ್ತು ಪ್ರಾಣಿಗಳನ್ನು ದೂರವಿಡುವ ಕುರಿತು ಅರಿವು ಮೂಡಿಸಲಾಯಿತು.
ಸಿಂಪಡಣೆ ನಂತರ ಕೈ-ಮುಖ ತೊಳೆಯುವುದು, ಬಟ್ಟೆ ಬದಲಾಯಿಸುವುದು ಹಾಗೂ ಖಾಲಿ ಕೀಟನಾಶಕದ ಪಾತ್ರೆಗಳನ್ನು ಆಹಾರ ಅಥವಾ ನೀರು ಸಂಗ್ರಹಿಸಲು ಬಳಸದೆ ಸುರಕ್ಷಿತವಾಗಿ ವಿಲೇವಾರಿ ಮಾಡುವ ಮಹತ್ವವನ್ನು ತಿಳಿಸಲಾಯಿತು.
ಕೊನೆಯಲ್ಲಿ ರೈತರು “ಕೀಟನಾಶಕ ಮತ್ತು ಕಳೆನಾಶಕ ಸಿಂಪಡಣೆ ಸುರಕ್ಷತಾ ಪ್ರತಿಜ್ಞೆ” ಸ್ವೀಕರಿಸಿ, ತಮ್ಮ ಆರೋಗ್ಯ, ಕುಟುಂಬದ ಆರೋಗ್ಯ ಮತ್ತು ಪರಿಸರದ ರಕ್ಷಣೆಗೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದಾಗಿ ಪ್ರತಿಜ್ಞೆ ಮಾಡಿದರು.
ಈ ಕಾರ್ಯಕ್ರಮದ ಮೂಲಕ ರೈತರಿಗೆ “ಸುರಕ್ಷಿತ ಸಿಂಪಡಣೆ – ಆರೋಗ್ಯವಂತ ರೈತ – ಸಮೃದ್ಧ ಕೃಷಿ” ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸಲಾಯಿತು.


