ಸಕಲೇಶಪುರ, ಆ.9: ತಾಲೂಕಿನ ಕಿರುಹುಣಸೆ ಹಾಗೂ ವಡೂರು ಗ್ರಾಮಗಳ ಸುತ್ತಮುತ್ತ ಎರಡು ಕಾಡಾನೆಗಳು ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಕಾಫಿ ತೋಟದ ಕಾರ್ಮಿಕರಲ್ಲಿ ಆತಂಕ ಮೂಡಿದೆ.‘ಭೀಮ’ ಮತ್ತು ‘ಕ್ಯಾಪ್ಟನ್’ ಎಂದು ಗುರುತಿಸಲಾಗಿರುವ ಎರಡು ಕಾಡಾನೆಗಳು ಪ್ರಸ್ತುತ ಕಿರುಹುಣಸೆ ಹಾಗೂ ವಡೂರು ಗ್ರಾಮಗಳ ವ್ಯಾಪ್ತಿಯಲ್ಲಿ ಇರುವ ಮಾಹಿತಿ ಹಿನ್ನೆಲೆಯಲ್ಲಿ ಸಕಲೇಶಪುರ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು, ಸಾರ್ವಜನಿಕರು ಹಾಗೂ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಾಡಾನೆಗಳ ಚಲನವಲನದ ಕುರಿತು ಮಾಹಿತಿ ನೀಡಿದ ಅರಣ್ಯಾಧಿಕಾರಿಗಳು, ಆನೆಗಳು ಸಂಚರಿಸುತ್ತಿರುವ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.

ವಿಶೇಷವಾಗಿ ಬೆಳಗಿನ ಜಾವ ಮತ್ತು ಸಂಜೆ ಸಮಯದಲ್ಲಿ ಕಾಫಿ ತೋಟಗಳಿಗೆ ತೆರಳುವಾಗ ಎಚ್ಚರಿಕೆ ವಹಿಸಬೇಕು. ತೋಟಗಳಿಗೆ ತೆರಳುವ ಮುನ್ನ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಕಾಡಾನೆಗಳ ಪ್ರಸ್ತುತ ಚಲನವಲನದ ಬಗ್ಗೆ ಮಾಹಿತಿ ಪಡೆದುಕೊಂಡು ನಂತರವೇ ಕೆಲಸಕ್ಕೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದರು.

ಕಾಡಾನೆಗಳು ಎದುರಾದ ಸಂದರ್ಭದಲ್ಲಿ ಅವುಗಳನ್ನು ಹಿಂಬಾಲಿಸುವುದು, ಹತ್ತಿರ ಹೋಗಿ ಛಾಯಾಚಿತ್ರ ಅಥವಾ ವಿಡಿಯೋ ತೆಗೆಯುವುದು, ಕಿರಿಕಿರಿ ಉಂಟುಮಾಡುವುದು ಹಾಗೂ ಅವುಗಳನ್ನು ಓಡಿಸಲು ಪ್ರಯತ್ನಿಸುವುದು ಮಾಡಬಾರದು. ಆನೆಗಳು ಕಂಡುಬಂದಲ್ಲಿ ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಿ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದರು.

ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಗುಂಪಿನಲ್ಲಿ ಸಂಚರಿಸುವುದು ಹಾಗೂ ತೋಟದೊಳಗೆ ತೆರಳುವ ಮುನ್ನ ಆನೆಗಳ ಚಲನವಲನದ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

ಕಾಡಾನೆಗಳ ಚಲನವಲನದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ನಿರಂತರವಾಗಿ ನಿಗಾ ವಹಿಸುತ್ತಿದ್ದು, ಸಾರ್ವಜನಿಕರ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಯಾವುದೇ ರೀತಿಯ ತುರ್ತು ಪರಿಸ್ಥಿತಿ ಎದುರಾದಲ್ಲಿ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಗ್ರಾಮಸ್ಥರಿಗೆ ಮನವಿ ಮಾಡಲಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *