
ಮಾಡಾಳು : ನಾಡಿನ ಲಕ್ಷಾಂತರ ಭಕ್ತರ ಆರಾಧ್ಯ ದೇವತೆಯಾಗಿರುವ ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಿ ಅಮ್ಮನವರ 167ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಭಾನುವಾರ ವಿದ್ಯುಕ್ತವಾಗಿ ಚಾಲನೆ ದೊರೆಯಿತು.
ಆಗಸ್ಟ್ ಮಾಸದಲ್ಲಿ ನೂಲ ಹುಣ್ಣಿಮೆಯ ನಂತರ ಬರುವ ಶುಭದಿನದಂದು ಅಮ್ಮನವರ ಮೂರ್ತಿ ತಯಾರಿಕೆಗೆ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮುರಿದೇವರ ಸಾನಿಧ್ಯದಲ್ಲಿ ಮೂಲ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ಶ್ರೀಗಳ ಸಮ್ಮುಖದಲ್ಲಿ ನೂರಾರು ಭಕ್ತರು ಪಾದಯಾತ್ರೆಯ ಮೂಲಕ ಪಂಚಲಿಂಗೇಶ್ವರ ಸ್ವಾಮಿ ದೇವಾಲಯದ ಮುಂಭಾಗದಲ್ಲಿರುವ ತೋಟಕ್ಕೆ ತೆರಳಿದರು.
ಬಳಿಕ ಸಂಪ್ರದಾಯದಂತೆ ಮೃತ್ತಿಕೆ (ಮಣ್ಣು) ಸಂಗ್ರಹಿಸುವ ಸ್ಥಳದಲ್ಲಿ ಶ್ರೀಗಳ ಪಾದಪೂಜೆ ನೆರವೇರಿಸಿ, ಮಣ್ಣನ್ನು ಸಂಗ್ರಹಿಸಲಾಯಿತು. ಅಲ್ಲಿಂದ ಶ್ರೀಗಳ ಸಮ್ಮುಖದಲ್ಲಿ ಮೆರವಣಿಗೆಯ ಮೂಲಕ ಮೂಲ ಸನ್ನಿಧಿಗೆ ಮೃತ್ತಿಕೆಯನ್ನು ತರಲಾಯಿತು.
ಈ ಸಂದರ್ಭದಲ್ಲಿ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಸ್ವಾಮೀಜಿಗಳು, 167 ವರ್ಷಗಳ ಹಿಂದೆಯೇ ಕೋಡಿಮಠದ ಮಹಾತಪಸ್ವಿಗಳು ಕೋಟಿ ಜಪ ಮಾಡಿ ಶ್ರೀ ಸ್ವರ್ಣ ಗೌರಿ ಅಮ್ಮನವರಿಗೆ ಮೂಗುತಿ ಧರಿಸಿ ಆಶೀರ್ವದಿಸಿದ್ದರು. ಅಂದಿನಿಂದ ಇಂದಿನವರೆಗೂ ಜಾತಿ-ಮತ ಭೇದವಿಲ್ಲದೆ ಸಂಪ್ರದಾಯದಂತೆ ಜಾತ್ರಾ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದು ತಿಳಿಸಿದರು.
ನಾಡಿನಾದ್ಯಂತ ಗಣಪತಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದರೂ, ಮಾಡಾಳು ಕ್ಷೇತ್ರದಲ್ಲಿ ಗಣಪನ ತಾಯಿಯಾದ ಗೌರಮ್ಮನವರಿಗೆ ವಿಶೇಷ ಆದ್ಯತೆ ಇರುವುದು ಈ ಕ್ಷೇತ್ರದ ವೈಶಿಷ್ಟ್ಯವಾಗಿದೆ ಎಂದರು.
ಶ್ರೀ ಸ್ವರ್ಣ ಗೌರಿ ಅಮ್ಮನವರ ಮೂರ್ತಿಯನ್ನು ಶಿಲ್ಪಿ ಮಧು ಆಚಾರ್ಯ ತಯಾರಿಸಲಿದ್ದು, ಭಾದ್ರಪದ ಮಾಸದ ತದಿಗೆ ದಿನದಂದು ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶಿಲಾ ದೇವಾಲಯದಲ್ಲಿ ಕೋಡಿಮಠ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಪ್ರತಿಷ್ಠಾಪನೆ ನೆರವೇರಲಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಾಡಾಳು ಗ್ರಾಮದ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿ ಭಕ್ತಿಭಾವದಿಂದ ಪಾಲ್ಗೊಂಡಿದ್ದರು.
