ಬೇಲೂರು : ಏಪ್ರಿಲ್.೧೨“ಹೆಬ್ಬಾಳಿನಲ್ಲಿ ಭಕ್ತಿಭಾವದಿಂದ ನಡೆದ ಕೆಂಡೋತ್ಸವ -ಪುಷ್ಪಗಿರಿ ಶ್ರೀಗಳು ಭಾಗಿ”

ಬೇಲೂರು ;- ಹೊಯ್ಸಳರ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದಿರುವ ಬೇಲೂರು ತಾಲ್ಲೂಕಿನ ಹೆಬ್ಬಾಳು ಗ್ರಾಮದಲ್ಲಿನ ಶ್ರೀ ಚನ್ನಬಸವೇಶ್ವರ ಮತ್ತು ಶ್ರೀ ಮಲ್ಲೇಶ್ವರಸ್ವಾಮಿ ಕೆಂಡೋತ್ಸವ ಅತ್ಯಂತ ಭಕ್ತಿ ಭಾವದಿಂದ ನಡೆಯಿತು.

ಈ ಸಂದರ್ಭದಲ್ಲಿ ಪುಷ್ಪಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿಗಳು ಕೆಂಡೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿ ನಾಡಿನಲ್ಲಿ ಸಮೃದ್ಧಿ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಪ್ರತಿ ವರ್ಷ ಹೆಬ್ಬಾಳು ಗ್ರಾಮದಲ್ಲಿ ಯುಗಾದಿ ಕಳೆದ ಬಳಿಕ ಎರಡು ದಿನಗಳ ಕಾಲ ನಡೆಯವ ಶ್ರೀಚನ್ನಬಸವೇಶ್ವರ ಮತ್ತು ಶ್ರೀ ಮಲ್ಲೇಶ್ವರಸ್ವಾಮಿ ಕೆಂಡೋತ್ಸವ, ಶ್ರೀ ದೊಡ್ಡಮ್ಮ ಹಾಗೂ ಶ್ರೀ ಚಿಕ್ಕಮ್ಮ ದೇವರ ಸಿಡಿ ಉತ್ಸವ ಅತ್ಯಂತ ಅದ್ದೂರಿಯಿಂದ ನಡೆಸಲಾಗುತ್ತದೆ.ಹೆಬ್ಬಾಳಿನ ಸುತ್ತ-ಮುತ್ತಿನ ಜೋಗಿಹಳ್ಳಿ, ತಿಮ್ಮನಹಳ್ಳಿ, ಶಿವಾಲ್ದಾಹಳ್ಳಿ, ಕಲ್ಲಹಳ್ಳಿ ಹಾಗೂ ಸಿಂದಿಗೆರೆ ಗ್ರಾಮಗಳು ಸೇರಿದಂತೆ ಹತ್ತಾರು ಗ್ರಾಮಗಳಿಗೆ ಪ್ರಮುಖ ಎನ್ನಲಾದ ಹೆಬ್ಬಾಳು ಅಮ್ಮನ ಜಾತ್ರೆ ವೈಶಿಷ್ಟಪೂರ್ಣವಾಗಿರುತ್ತದೆ. ಏಪ್ರಿಲ್ ೧೨ ರ ಶುಕ್ರವಾರ ಬೆಳಿಗ್ಗೆ ಶ್ರೀ ಚನ್ನಬಸವೇಶ್ವರ ಮತ್ತು ಶ್ರೀ ಮಲ್ಲೇಶ್ವರ ಸ್ವಾಮಿಗೆ ವಿಶೇಷ ಅಭಿಷೇಷ, ಪಂಚಾಭಿಷೇಕ ಹಾಗೂ ಮಹಾಮಂಗಳಾರತಿ ನಡೆಸಲಾಯಿತು.

ಈ ಕಾರ್ಯವನ್ನು ಯೋಗೀಶ್ ಕುಟುಂಬ ವರ್ಗದವರು ನಡೆಸಿಕೊಟ್ಟರು, ಪುಷ್ಪಗಿರಿ ಜಗದ್ಗುರುಗಳು ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಪ್ರಮುಖ ರಸ್ತೆಯಲ್ಲಿ ಪಾದಯಾತ್ರೆ ಮೂಲಕ ಮೆರವಣಿಗೆ ನಡೆಸಿ ಧ್ವಜಾರೋಹಣ ಮಾಡಲಾಯಿತು. ಗ್ರಾಮದ ದೇವತೆಗಳಿಗೆ ಪೂಜ್ಯರು ಅಷ್ಟೋತ್ತರ ಪೂಜೆಯೊಂದಿಗೆ ಈ ವರ್ಷ ಸಮೃದ್ಧಿ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಕಳಸಹೊತ್ತ ತರುಣಿ ಕೆಂಡದ ಮೇಲೆ ನಡೆದುಕೊಂಡ ನಂತರ ಎಲ್ಲಾ ದೇವತೆಗಳು ಮತ್ತು ಭಕ್ತರು ತಮ್ಮ ಹರಕೆಗಳನ್ನು ಪೂರೈಸಿ ಧನ್ಯರಾದರು.

ಈ ಸಂದರ್ಭದಲ್ಲಿ ಮಾತನಾಡಿದ ಪುಷ್ಪಗಿರಿ ಜಗದ್ಗುರುಗಳು, ಜಾತ್ರಾ ಮಹೋತ್ಸವಗಳು ಈ ನಾಡಿನ ಸಂಸ್ಕೃತಿಯ ಸಂಕೇತ, ನಮ್ಮ ಪೂರ್ವಿಕರು ಎಲ್ಲಾ ಜಾತಿ,ಧರ್ಮದವರು ಒಟ್ಟಾಗಿ ಸಾಮರಸ್ಯದಿಂದ ಸೇರಲು ಜಾತ್ರೆ ಮತ್ತು ಹಬ್ಬಗಳ ಆಚರಣೆ ಮಾಡುತ್ತಾ ಬಂದಿದ್ದಾರೆ. ಈ ಹಿಂದೆ ಹೊಯ್ಸಳರಿಗೆ ಹೆಬ್ಬಾಗಿಲು ಎಂಬ ಖ್ಯಾತಿ ಪಡೆದ ಹೆಬ್ಬಾಳು ಗ್ರಾಮದ ಜಾತ್ರಾ ಮಹೋತ್ಸವ ಕಳೆದ ೩೬ ವರ್ಷದಿಂದ ಸಡಗರ ಮತ್ತು ಸಂಭ್ರಮದಿಂದ ಆಚರಿಸಿ, ಜಗದ್ಗುರುಗಳನ್ನು ಕರೆದು ಆರ್ಶಿವಾದ ಪಡೆಯುತ್ತಿದ್ದು ಗ್ರಾಮದಲ್ಲಿ ಎಂದಿಗೂ ಭಿನ್ನಾಭಿಪ್ರಾಯವಿಲ್ಲದೆ ಎಲ್ಲಾರೂ ಇಂತಹ ಕಾರ್ಯದಲ್ಲಿ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಸದಸ್ಯ ಗಿರೀಶ್, ಗ್ರಾಮಸ್ಥರಾದ ವಿಘ್ನಶಯ್ಯ, ವೇ,ಜಗದೀಶ್,ಚಂದ್ರಶೇಖರಯ್ಯ, ಚಂದ್ರಯ್ಯನವರು, ರಾಮೇಗೌಡ, ರಾಜಶೇಖರ್, ತೀರ್ಥಕುಮಾರ್, ರಮೇಶ್ ಸೇರಿದಂತೆ ಚನ್ನಬಸವೇಶ್ವರ ಯುವಕ ಸಂಘದ ಯುವಕರು ಹೆಚ್ಚಾಗಿ ಭಾಗಿಯಾಗಿದ್ದರು.

ಬಾಕ್ಸ್ ನ್ಯೂಸ್ ;-ಶತಮಾನಗಳ ಐತಿಹಾಸಿಕ ಹೊಂದಿರುವ ಹೆಬ್ಬಾಳಿನ ಜಾತ್ರೆ ೬೦ ವರ್ಷಗಳ ಕಾಲ ಸ್ಥಗಿತವಾಗಿತ್ತು, ಬಳಿಕ ಗ್ರಾಮಸ್ಥರು ಸೇರಿ ೧೯೯೧ ರಿಂದ ಈ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಕೆಂಡೋತ್ಸವ, ಸಿಡಿ ಉತ್ಸವ, ಮರಿ ಸಿಡಿಉತ್ಸವ ಹೀಗೆ ನಾನಾ ಬಗೆಯಲ್ಲಿ ನಡೆಯುವ ಜಾತ್ರಾಗೆ ಸಾವಿರಾರು ಭಕ್ತರು ಸೇರುವ ವಾಡಿಕೆ ಬೆಳೆದುಕೊಂಡು ಬಂದಿದೆ ಎಂದು ಬೇಲೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಗೂ ಪತ್ರಕರ್ತ ಹೆಬ್ಬಾಳು ಹಾಲಪ್ಪ ಹೇಳಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *