
ಸಕಲೇಶಪುರ : ಇಂದು ಸಂಜೆ ತಾಲೂಕಿನ ಹೆಸರು ಅರಣ್ಯ ವ್ಯಾಪ್ತಿಯ ಯಸಳೂರು ವ್ಯಾಪ್ತಿಯ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿರುವ ಅರ್ಜುನನ ಸಮಾಧಿ ಆವರಣದಲ್ಲಿ ನಿರ್ಮಾಣವಾಗಿರುವ ಅರ್ಜುನನ ಪ್ರತಿಮೆ ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರ ಗಣ್ಯರುಗಳಿಂದ ಉದ್ಘಾಟನೆಯಾಗಲಿರುವು ದರಿಂದ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ ಈಗಾಗಲೇ ಅರ್ಜುನನ ಪ್ರತಿಮೆ ಉದ್ಘಾಟನೆಯಾಗುವುದು ವಿಳಂಬವಾಗಿದೆ. ಅರ್ಜುನನ ಪೈಬರ್ ಪ್ರತಿಮೆ ಮಾಡಿರುವುದು ಬೇಸರವಾಗಿದೆ. ಅರ್ಜುನನಿಗೆ ಕಂಚಿನ ಪ್ರತಿಮೆ ಮಾಡಿದ್ದರೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತಿತ್ತು.
ಈ ನಿಟ್ಟಿನಲ್ಲಿ ಅಲ್ಲದೆ ಸಮಾಧಿಗೆ ಹೋಗಲು ಡಾಂಬರ್ ರಸ್ತೆ ಇಲ್ಲ, ತಾತ್ಕಾಲಿಕವಾಗಿ ಇಲ್ಲಿ ಶೌಚಾಲಯದ ವ್ಯವಸ್ಥೆ ಮಾಡಲಾಗಿದ್ದು ಸರಿಯಾದ ರೀತಿಯ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿ ನಿರ್ಮಾಣವಾಗಳು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು. ಅರ್ಜುನನ ಕುರಿತು ಮಾಹಿತಿಯನ್ನು ಸಹ ಕಂಚಿನ ಫಲಕದಲ್ಲಿ ಹಾಕಬೇಕು ಮತ್ತು ಅರ್ಜುನನ ತಮಾಷೆಯನ್ನು ವೀಕ್ಷಣೆ ಮಾಡಲು ಬರುವ ಪ್ರವಾಸಿಗರಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸಬೇಕು. ಈ ಪ್ರದೇಶವು ಮುಂದಿನ ದಿನಗಳಲ್ಲಿ ಹೆಸರಾಂತ ಪ್ರವಾಸಿ ಸ್ಥಳವಾಗಬೇಕು. ಈ ನಟ್ಟಿನಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮಾನ್ಯ ಸಚಿವರಲ್ಲಿ ನಾನು ಮನವಿ ಮಾಡುತ್ತೇನೆ. ಜೊತೆಗೆ ತಾಲೂಕಿನಲ್ಲಿ ಉಂಟಾಗಿರುವ ಕಾಡಾನೆ ಸಮಸ್ಯೆ ಶಾಶ್ವತವಾಗಿ ಬಗೆಹರಿಸಬೇಕು ಹಾಗೂ ಬೆಳಗಾರರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಮುಂದಾಗಬೇಕು ಮತ್ತು ಅರ್ಜುನನ ಸಮಾಧಿ ಹೋರಾಟದಲ್ಲಿ 19 ಜನರ ಮೇಲೆ ದಾಖಲಾಗಿರುವ ಪ್ರಕರಣವನ್ನು ಸರ್ಕಾರ ಹಿಂಪಡೆಯಬೇಕೆಂದು ನಾನು ಸಚಿವರ ಬಲಿ ಮನವಿ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಸಕಲೇಶಪುರ ಎಸಿಎಫ್ ಮಧುಸೂದನ್, ಹಾಸನ ಎಸಿಎಫ್ ಮೋಹನ್, ಯಸಳೂರು ವಲಯ ಅರಣ್ಯ ಅಧಿಕಾರಿ ಸಿದ್ದರಾಮಯ್ಯ ಹಿರೇಮಠ್ ಸೇರಿದಂತೆ ಇತರರು ಹಾಜರಿದ್ದರು.





