ಬೇಲೂರು.ಏಪ್ರಿಲ್.೧೫ “ಸಂಭ್ರಮದಿಂದ ಹೆಬ್ಬಾಳಾಮ್ಮನ ಸಿಡಿ ಉತ್ಸವ -ಸಾವಿರಾರು ಭಕ್ತರು ಭಾಗಿ”

ವಿಶ್ವ ವಿಖ್ಯಾತ ಬೇಲೂರು ತಾಲ್ಲೂಕಿನ ಹೊಯ್ಸಳರ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದ ಹೆಬ್ಬಾಳು ಗ್ರಾಮದ ಶ್ರೀ ದೊಡ್ಡಮ್ಮ ಮತ್ತು ಶ್ರೀ ಚಿಕ್ಕಮ್ಮ ದೇವರ ಸಿಡಿ ಉತ್ಸವ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸಾವಿರಾರು ಭಕ್ತರು ಸಿಡಿ ಉತ್ಸವದಲ್ಲಿ ಹರಕೆ ಸಲ್ಲಿಸಿ ಧನ್ಯರಾದರು.

ಪ್ರತಿ ವರ್ಷ ಯುಗಾದಿ ಹಬ್ಬದ ಬಳಿಕ ನಡೆಯುವ ಹೆಬ್ಬಾಳಿನ ಶ್ರೀ ಚನ್ನಬಸವೇಶ್ವರ ಮತ್ತು ಶ್ರೀ ಮಲ್ಲೇಶ್ವರಸ್ವಾಮಿ ಕೆಂಡೋತ್ಸವದ ಮರುದಿನದಲ್ಲಿ ಶ್ರೀ ದೊಡ್ಡಮ್ಮ ಮತ್ತು ಶ್ರೀ ಚಿಕ್ಕಮ್ಮ ದೇವರ ಸಿಡಿ ಉತ್ಸವ ನಡೆಸುವ ವಾಡಿಕೆ ಶತಮಾನಗಳಿಂದ ನಡೆದುಕೊಂಡು ಬಂದಿದೆ.

ಸಿಡಿ ಉತ್ಸವಕ್ಕೆ ಮುನ್ನ ಬೃಹತ್ ಕಲ್ಲಿನ ಕಂಬಕ್ಕೆ ಸಿಡಿ ಮರವನ್ನು ಇಲ್ಲಿನ ವಿಶ್ವಕರ್ಮ ಸಮುದಾಯ ಕಟ್ಟಿ ಪೂಜೆ ಸಲ್ಲಿಸುತ್ತಾರೆ. ಬಳಿಕ ಎಲ್ಲಾ ಸಮುದಾಯ ಮುಖಂಡರು ಸಿಡಿ ಮರದ ಬಳಿ ಆಗಮಿಸಿ ಈ ವರ್ಷ ನಾಡಿನಲ್ಲಿ ಸಮೃದ್ಧಿ ಮಳೆ-ಬೆಳೆಯಾಗಲಿ ಎಂದು ವಿಶೇಷವಾಗಿ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕವೇ ನೂರಾರು ಈಡುಗಾಯಿಯನ್ನು ಸಿಡಿಮರದ ಕಲ್ಲಿನ ಕಂಬಕ್ಕೆ ಹರಕೆ ಸಲ್ಲಿಸುತ್ತಾರೆ.

ಬಳಿಕ ಉಪವಾಸದಲ್ಲಿರುವ ಮೂವರು ತರುಣರನ್ನು ಒಬ್ಬರನ್ನು ಕರೆದುಕೊಂಡು ಬಂದು ಸಿಡಿ ಮರಕ್ಕೆ ಸೀರೆಗಳಿಂದ ಬೀಗಿ ಭದ್ರತೆಯಿಂದ ಕಟ್ಟಿ ಮೂರು ಸುತ್ತು ಪ್ರದಕ್ಷಿಣೆ ನಡೆಸುತ್ತಾರೆ.

ಈ ಸಂದರ್ಭದಲ್ಲಿ ಗ್ರಾಮದ ದೊಡ್ಡಮ್ಮ ಮತ್ತು ಚಿಕ್ಕಮ್ಮ ಉತ್ಸವ ಮೂರ್ತಿ ಹಾಗೂ ಚಾಮದೇವರುಗಳು ಕೂಡ ಪ್ರದಕ್ಷಿಣೆ ಕಾರ್ಯವನ್ನು ನಡೆಸುತ್ತಾರೆ. ತಮಟೆ ಮತ್ತು ಚಟ್ಟಿಮೇಳೆದ ತಾಳಕ್ಕೆ ತಕ್ಕಂತೆ ಗಣಮಗ(ದೇವರಮಗ) ಇವರು ಹೊಂಬಾಳೆಯನ್ನು ಭಕ್ತರ ಮೇಲೆ ಎರಚಿ ಎಲ್ಲರೂ ಆರೋಗ್ಯದಿಂದ ಇರುವಂತೆ ಹರೆಸುವ ವಾಡಿಕೆ ಬೆಳೆದುಕೊಂಡು ಬಂದಿದ್ದು ಸಿಡಿ ಉತ್ಸವಕ್ಕೆ ಸುತ್ತಲಿನ ೧೨ ಗ್ರಾಮಸ್ಥರು ಮತ್ತು ನೂರಾರು ಗ್ರಾಮದಿಂದ ಆಗಮಿಸಿದ ಬಂಧು-ಬಳಗದ ಜನಸ್ತೋಮ ಸೇರುವ ಮೂಲಕ ಶಕ್ತಿ ದೇವಿಯ ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಬೇಲೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಗೂ ಗ್ರಾಮದ ಮುಖಂಡ ಹೆಬ್ಬಾಳು ಹಾಲಪ್ಪ. ೧೨ ನೇ ಶತಮಾನದಲ್ಲಿ ಬೇಲೂರು (ವೇಲಾಪುರಿ) ಹಳೇಬೀಡು(ದ್ವಾರಸಮುದ್ರ) ಈ ಎರಡು ಪಟ್ಟಣಗಳಿಗೆ ಹೊಯ್ಸಳರು ಹೆಬ್ಬಾಗಿಲನನ್ನು ಮಾಡಿಕೊಂಡು ಕೆಲ ಕಾಲ ವಿಶ್ರಾಂತಿ ಪಡೆಯುತ್ತಿದ್ದರು ಎಂಬ ಐತಿಹ್ಯವಿದೆ ಹಾಗೇಯೆ ಇಲ್ಲಿನ ಪೂರ್ವಿಕರು ಕೂಡ ಹೇಳುತ್ತಾರೆ. ಅಂದಿನಿಂದಲೂ ಹೆಬ್ಬಾಳಾಮ್ಮನ ಜಾತ್ರೆ ಕೂಡ ವಿಶೇಷತೆಯನ್ನು ಪಡೆದುಕೊಂಡು ಬಂದಿದೆ.

ಚಿಕ್ಕಮಗಳೂರು ಸಿಂದಿಗೆರೆ ಗ್ರಾಮದಲ್ಲಿ ಇಂದಿಗೂ ಕೂಡ ಹೆಬ್ಬಾಳಿನ ಶ್ರೀ ದೊಡ್ಡಮ್ಮನವರು ತೆರಳದೆ ಜಾತ್ರೆಯನ್ನು ನಡೆಸುವುದಿಲ್ಲ, ಹಾಗೇಯೆ ಹೆಬ್ಬಾಳಿನ ಸುತ್ತ ಮುತ್ತಲ ಗ್ರಾಮದಲ್ಲಿ ಶ್ರೀ ದೊಡ್ಡಮ್ಮ ಮತ್ತು ಶ್ರೀ ಚಿಕ್ಕಮ್ಮ ದೇವರಿಗೆ ನಡೆದುಕೊಳ್ಳುತ್ತಾರೆ. ಸಾವಿರಾರು ಭಕ್ತರು ಸೇರಿದ್ದು ದೇವಿರ ಶಕ್ತಿಗೆ ಸಾಕ್ಷಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಚಂದ್ರಯ್ಯನವರು, ತೀರ್ಥಕುಮಾರ್, ವಿಘ್ನಶಯ್ಯ, ರಾಮೇಗೌಡ, ರಾಜಶೇಖರ್, ಮೋಹನ್, ಹಲಗಯ್ಯ, ಯೋಗೀಶ್, ಜಗದೀಶ್, ಜೆಪಿ ಪ್ರಕಾಶ್, ಸುರೇಶ್, ಮಲ್ಲೇಶ್, ಸುಧಾಕರ್ ಸೇರದಂತೆ ಇನ್ನು ಮುಂತಾದವರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *