
ನವದೆಹಲಿ (ಮೇ 28, 2023): ಆಧುನೀಕರಣದತ್ತ ದಾಪುಗಾಲು ಹಾಕುತ್ತಿರುವ ನವ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ತುಂಬಿದ ಬೆನ್ನಲ್ಲೇ ಆಧುನಿಕ ಸ್ಪರ್ಶದೊಂದಿಗೆ ಹೊಸ ಸಂಸತ್ ಭವನ ಲೋಕಾರ್ಪಣೆಯಾಗುತ್ತಿದೆ. ಬೆಳಗ್ಗೆ 7.25ರ ಸುಮಾರಿಗೆ ಪ್ರಧಾನಿ ಮೋದಿ ನೂತನ ಸಂಸತ್ ಭವನಕ್ಕೆ ಆಗಮಿಸಿದ್ದು,ಪೂಜಾ ಕೈಂಕರ್ಯ ನಡೆಸಿದ್ದಾರೆ. ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಬಳಿಕ ಪ್ರಧಾನಿ ಮೋದಿ ಹೋಮ ಹವನ ನಡೆಸುತ್ತಿದ್ದು, ಮೋದಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸಾಥ್ ನೀಡಿದ್ದಾರೆ. ಗಣಪತಿ ಹೋಮವನ್ನೂ ಸಹ ಪ್ರಧಾನಿ ಮೋದಿ ಮಾಡಿದ್ದಾರೆ. ಮಧ್ಯಾಹ್ನದವರೆಗೂ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ನೂತನ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮ ಅದ್ಧೂರಿಯಾಗಿ ಹಾಗೂ ಪೂಜಾ ಕೈಂಕರ್ಯಗಳೊಂದಿಗೆ ಸಾಂಸ್ಕೃತಿಕವಾಗಿ ನಡೆಯಲಿದೆ.
