
ಸಕಲೇಶಪುರ : ತಾಲ್ಲೂಕಿನ ಕ್ಯಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲುವಳ್ಳಿ- ಕಡಗರವಳ್ಳಿಯಲ್ಲಿ ನೆನ್ನೆ ರಾತ್ರಿ ಭಾರಿ ಗಾತ್ರದ ಮರವು ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬದ ಮೇಲೆ ಬಿದ್ದು, ಎರಡು ವಿದ್ಯುತ್ ಕಂಬಗಳು ಸಂಪೂರ್ಣ ಮುರಿದು ಹೋಗಿದ್ದು ರಸ್ತೆಯಲ್ಲಿ ಯಾವುದೇ ವಾಹನಗಳು ಹಾಗೂ ಸಾರ್ವಜನಿಕರು ತಿರುಗಾಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯ ಬಾವಿಗೆ ಇಟ್ಟಿದ್ದ ಮೋಟಾರ್ ಗೆ ಈ ವಿದ್ಯುತ್ ಕಂಬದಿಂದ ಸಂಪರ್ಕವನ್ನು ಕಲ್ಪಿಸಲಾಗಿತ್ತು.
ಮರ ಬಿದ್ದ ಕಾರಣ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಗ್ರಾಮಸ್ಥರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಿದಂತಹ ಪರಿಸ್ಥಿತಿ ಎದುರಾಗಿದ್ದ ಪರಿಣಾಮ ಗ್ರಾಮದ ಯುವಕರೆಲ್ಲ ಸೇರಿ ಬಿದ್ದ ಮರವನ್ನು ಕಟಾವು ಮಾಡಿ ವಾಹನ ಸಂಚಾರಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.
ಗ್ರಾಮಸ್ಥರ ಕುಡಿಯುವ ನೀರಿನ ವಿದ್ಯುತ್ ಸಂಪರ್ಕಕ್ಕಾಗಿ ಗ್ರಾಮಸ್ಥರೆಲ್ಲ ಎ ಇ ಇ ಹರೀಶ್ ಅವರನ್ನು ಫೋನ್ ಮುಖಾಂತರ ಸಂಪರ್ಕಿಸಿ ಕೂಡಲೇ ವಿದ್ಯುತ್ ಕಂಬವನ್ನು ಹಾಕಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಯುವಕರಾದ ರವಿಕುಮಾರ್ ,ಯುವರಾಜ್ ,ಸಂತೋಷ್, ರಮೇಶ್ , ಹೇಮಂತ್ ಕುಮಾರ್ , ಕುಮಾರ್ ಸ್ವಾಮಿ, ಚೇತನ್, ಹೇಮಂತ್ , ರತನ್, ಹಾಗೂ ಇತರರು ಇದ್ದರು.
