
ಸಕಲೇಶಪುರ : ತಾಲ್ಲೂಕಿನ ಕ್ಯಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲವಳ್ಳಿ ಕಡಗರವಳ್ಳಿಯಲ್ಲಿ ಕಳೆದ ಬುಧವಾರ ರಾತ್ರಿ ಭಾರಿ ಗಾತ್ರದ ಮರವು ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಗಳ ಮೇಲೆ ಬಿದ್ದು ಎರಡು ವಿದ್ಯುತ್ ಕಂಬಗಳು ಸಂಪೂರ್ಣ ಮುರಿದು ಹೋಗಿ ರಸ್ತೆಯಲ್ಲಿ ಯಾವುದೇ ವಾಹನಗಳು ಹಾಗೂ ಸಾರ್ವಜನಿಕರು ತಿರುಗಾಡದಂತಹ ಪರಿಸ್ಥಿತಿಯಾಗಿತ್ತು.
ಅಲ್ಲದೆ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯ ಬಾವಿಗೆ ಅಳವಡಿಸಿದ್ದ ಮೋಟಾರ್ ಗೆ ಈ ವಿದ್ಯುತ್ ಕಂಬದಿಂದ ಸಂಪರ್ಕವಿದ ಕಾರಣ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆಯಾಗಿತ್ತು.ಗ್ರಾಮದ ಯುವಕರೆಲ್ಲ ಸೇರಿ ಕಂಬದ ಮೇಲೆ ಬಿದ್ದ ಮರವನ್ನು ತೆರವುಗೊಳಿಸಿ, ಸಾರ್ವಜನಿಕರಿಗೆ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದರು.
ಗ್ರಾಮದಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಕುಡಿಯುವ ನೀರಿಗಾಗಿ ಸಮಸ್ಯೆ ಹೆಚ್ಚಾದ ಕಾರಣ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ಅವರನ್ನು ಗ್ರಾಮದ ಸಮಸ್ಯೆಯನ್ನು ವಿವರಿಸಿ ಆದಷ್ಟು ಬೇಗ ವಿದ್ಯುತ್ ಕಂಬವನ್ನು ಹಾಕಿಕೊಡುವ ಮೂಲಕ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿಕೊಡಬೇಕಾಗಿ ಮನವಿ ಮಾಡಿದರು.
ಗ್ರಾಮಸ್ಥರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ಕೂಡಲೇ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾಂತರಾಜರನ್ನು ಸಂಪರ್ಕಿಸಿ ಬಾವಿಗೆ ಅಳವಡಿಸಿದ ಮೋಟರ್ ಗೆ ತಾತ್ಕಾಲಿಕ ಮಟ್ಟದ ವಿದ್ಯುತ್ ವ್ಯವಸ್ಥೆಯನ್ನು ಮಾಡಿ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಗ್ರಾಮಸ್ಥರ ಮನವಿ ಹಾಗೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಸಮಸ್ಯೆಯನ್ನು ಬಗೆಹರಿಸಿ ಕೊಟ್ಟ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ಹಾಗೂ ಕ್ಯಾನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾಂತರಾಜ್ ಅವರಿಗೆ ಗ್ರಾಮಸ್ಥರಿಂದ ಮೆಚ್ಚುಗೆಯ ಪ್ರಶಂಸೆ ಮಾತುಗಳು ಕೇಳಿಬಂದಿವೆ.



