
ಸಕಲೇಶಪುರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಕೃತ್ಯವನ್ನು ಖಂಡಿಸಿ ಹಾಗೂ ಈ ಕೃತ್ಯದಲ್ಲಿ ನಿರ್ದೋಷಿಗಳನ್ನು ಹತ್ಯೆ ಮಾಡಿದ ಭಯೋತ್ಪಾದಕರ ವಿರುದ್ಧ ಅಕ್ರೋಶ ವ್ಯಕ್ತಪಡಿಸಲು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಹೇಮಾವತಿ ಪ್ರತಿಮೆ ಮುಂಭಾಗದಿಂದ ಉಪವಿಭಾಗಾಧಿಕಾರಿಗಳ ಕಚೇರಿವರೆಗೆ ಕ್ಯಾಂಡಲ್ ಪ್ರಜ್ವಲನದ ಮೂಲಕ ಮೌನ ಮೆರವಣಿಗೆ ನಡೆಸಿ, ಭಯೋತ್ಪಾದಕರ ವಿರುದ್ಧ ಘೋಷಣೆಗಳನ್ನು ಕೂಗಿದರು. ಘಟನೆಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ಅವರು, “ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳು ಅತ್ಯಂತ ಖಂಡನೀಯ. ಈ ಅಮಾನವೀಯ ಹತ್ಯೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಭಯೋತ್ಪಾದಕರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ತಕ್ಷಣ ಮುಂದಾಗಬೇಕು” ಎಂದು ಒತ್ತಾಯಿಸಿದರು.
“ಈ ರೀತಿಯ ದುಷ್ಕೃತ್ಯಗಳು ಪುನರಾವರ್ತನೆಯಾಗದಂತೆ ಮುಕ್ತ, ಭದ್ರ ಹಾಗೂ ಶಾಂತಿಯುತ ವಾತಾವರಣ ನಿರ್ಮಿಸಲು ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ನಾವು ಕೇಂದ್ರ ಸರ್ಕಾರ ಕೈಗೊಳ್ಳುವ ಎಲ್ಲಾ ಸೂಕ್ತ ಕ್ರಮಗಳಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಇಂತಹ ಸಂದರ್ಭದಲ್ಲಿ ನಾವು ರಾಜಕಾರಣ ಮಾಡುವುದಿಲ್ಲ; ನೈತಿಕವಾಗಿ ಬೆಂಬಲಿಸುತ್ತೇವೆ. ಇದು ದೇಶದ ಐಕ್ಯತೆಯ ಪ್ರಶ್ನೆಯಾಗಿದ್ದು, ಇದನ್ನು ನಾವು ಖಂಡಿಸುತ್ತೇವೆ” ಎಂದು ಹೇಳಿದರು.
“ಭಯೋತ್ಪಾದನಾ ಕೃತ್ಯವನ್ನು ಒಂದು ಧರ್ಮಕ್ಕೆ ಲೇಪಿಸುವುದು ಸರಿಯಲ್ಲ. ಇಡೀ ದೇಶವೇ ಇದನ್ನು ಖಂಡಿಸುತ್ತಿದೆ. ಇಂದು ಭಾರತ ದೇಶ ಒಗ್ಗಟ್ಟಿನಿಂದ ನಿಂತಿದೆ” ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಸೈಯದ್ ಮುಫೀಜ್, ಕೆಪಿಸಿಸಿ ಸದಸ್ಯ ಎಡೆಹಳ್ಳಿ ಆರ್. ಮಂಜುನಾಥ್, ಕೊಳ್ಳಹಳ್ಳಿ ಸಲೀಂ, ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ, ಅಲ್ಪಸಂಖ್ಯಾತರ ತಾಲೂಕು ಅಧ್ಯಕ್ಷ ಮೊಹಮ್ಮದ್ ಹನೀಫ್, ಕಾಂಗ್ರೆಸ್ ಮುಖಂಡರಾದ ವಿಜಯ್ ಕುಮಾರ್, ಗೋದ್ದು ಲೋಕೇಶ್, ಬೈಕೆರೆ ದೇವರಾಜ್, ಶೋಭಾ ಕೆಂಪೇಗೌಡ, ಮೊಹಮ್ಮದ್ ಪೈಝಾನ್, ವಕೀಲ ಅಕ್ರಂಪಾಶ, ಸೇರಿದಂತೆ ಅನೇಕರು ಭಾಗವಹಿಸಿದ್ದರು.

