
ಅಮಾಯಕ ಜೀವಗಳ ಜೊತೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳು ವಿದ್ಯುತ್ ಪರಿವರ್ತಕ ಸ್ಥಳಾಂತರ ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡಲು ನಿರ್ಧಾರ ಬೇಲೂರು ಅರೇಹಳ್ಳಿ: ಕಳೆದ 8 ವರ್ಷಗಳಿಂದ ನಿರುಪಯುಕ್ತವಾಗಿರುವ ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರ ಮಾಡುವಂತೆ ಕಳೆದೆರಡು ವರ್ಷಗಳಿಂದ ನಿರಂತರವಾಗಿ ಮನವಿ ಸಲ್ಲಿಸಿದರೂ ಸಹ ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಜನಸಾಮಾನ್ಯರು ಬೇಸತ್ತಿದ್ದಾರೆ ಎಂದು ಗ್ರಾ.ಪಂ ಸದಸ್ಯ ನಾಗೇಶ್ ಶೆಟ್ಟಿ ಆರೋಪಿಸಿದರು. ಪಟ್ಟಣದ ಸಕಲೇಶಪುರ ರಸ್ತೆಯ ಅಂಬೇಡ್ಕರ್ ನಗರದಲ್ಲಿ ನೂತನವಾದ ಅಂಗನವಾಡಿಯ ಬಳಿಯಿರುವ ನಿರುಪಯೋಗಿ ಟಿ.ಸಿ ಯನ್ನು ಸ್ಥಳಾಂತರ ಮಾಡದೇ ಇರುವುದನ್ನು ಕುರಿತು ಮಾತನಾಡಿದ ಅವರು, ಏಳೆಂಟು ವರ್ಷಗಳ ಹಿಂದೆ ನೀರನ್ನು ತರಲು ಟ್ಯಾಂಕಿನ ಬಳಿ ತೆರಳಿದ್ದ ಗ್ರಾಮದ ವೃದ್ಧೆ ಸಿದ್ದಮ್ಮರವರಿಗೆ ವಿದ್ಯುತ್ ಪ್ರವಹಿಸಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿ ಪವಾಡ ಸದೃಶ್ಯ ದೊಡ್ಡ ಅಪಾಯದಿಂದ ಪಾರಾಗಿದ್ದರು. ಈ ಘಟನೆ ಮಾಸುವ ಮುನ್ನವೆ ತಂಗಮ್ಮ ಎಂಬ ಇನ್ನೋರ್ವ ವೃದ್ಧೆಗೆ ಕರೆಂಟ್ ಶಾಕ್ ಹೊಡೆದಿತ್ತು. ಆಗ ಅಧಿಕಾರಿಗಳು ಗಾಯಾಳುಗಳ ಸಂಬಂಧಿಕರನ್ನು ಸಮಾಧಾನಪಡಿಸಲೆತ್ನಿಸಿದರು. ಈವಾಗ ನಿರುಪಯುಕ್ತ ಟಿಸಿ ಬಳಿ ನೂತನವಾಗಿ ಅಂಗನವಾಡಿಯನ್ನು ನಿರ್ಮಾಣ ಮಾಡಿದ್ದೇವೆ. ನಾಲ್ಕೈದು ಅಡಿಗಳಷ್ಟೆ ದೂರವಿದ್ದು ತುಕ್ಕು ಹಿಡಿಯುತ್ತಿರುವ ವಿದ್ಯುತ್ ಪರಿವರ್ತಕ ಹಾಗೂ ಕಂಬಗಳ ಹತ್ತಿರ ಮಕ್ಕಳು ಆಟವಾಡಲು ಹೋಗುವ ಸಂಭವವಿದೆ. ಈ ನಿಟ್ಟಿನಲ್ಲಿ ಅಪಾಯವಾಗುವ ಮುನ್ನ ಕಂಬಗಳನ್ನು ಸ್ಥಳಾಂತರ ಮಾಡುವುದು ಅನಿವಾರ್ಯವಾಗಿದೆ. ಪಂಚಾಯಿತಿಯ ಅನುದಾನದಲ್ಲಿ ರಸ್ತೆ ನಿರ್ಮಿಸಲು ಅನುಮೋದನೆ ದೊರೆತಿದ್ದು ಜೋಡಿ ಕಂಬಗಳಿರುವುರಿಂದ ಕೆಲಸ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಬಡವರ ಜೀವವನ್ನು ತೆಗೆಯಲು ಯಮಸ್ವರೂಪಿಯಾಗಿ ನಿಂತಿರುವ ನಿರುಪಯುಕ್ತ ವಿದ್ಯುತ್ ಪರಿವರ್ತಕವವನ್ನು ಸ್ಥಳಾಂತರ ಮಾಡುವಂತೆ ಅನೇಕ ಬಾರಿ ಜೆ.ಇ ರೇವಣ್ಣನವರ ಲಿಖಿತವಾಗಿ ಮನವಿಯನ್ನು ಸಲ್ಲಿಸಲಾಗಿದೆ. ಅರೇಹಳ್ಳಿ ಹೋಬಳಿ ವ್ಯಾಪ್ತಿಗೆ ಸಾರ್ವಜನಿಕರ ಮನವಿಗೆ ಸ್ಪಂದಿಸದ ಜೆ.ಇ ರೇವಣ್ಣನವರ ಅವಶ್ಯಕತೆ ಇಲ್ಲ. ಅಧಿಕಾರಿಗಳಿಗೆ ಪ್ರಾಣ ಬೇಕಿದ್ದರೆ ಅಮಾಯಕರ ಪ್ರಾಣದ ಬದಲಾಗಿ ನಮ್ಮದನ್ನು ತೆಗೆದುಕೊಳ್ಳಲಿ. ನಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸದಿದ್ದರೆ ರಸ್ತೆ ತಡೆ ನಡೆಸಲು ತೀರ್ಮಾನಿಸಿದ್ದೇವೆ. ಇದರಿಂದ ಆಗುವ ಪರಿಣಾಮಗಳಿಗೆ ಜೆ.ಇ ರೇವಣ್ಣನವರೆ ನೇರವಾಗಿ ಕಾರಣರಾಗುತ್ತಾರೆ ಎಂದು ಗುಡುಗಿದರು. ಈ ವೇಳೆ ಗ್ರಾ.ಪಂ ಸದಸ್ಯರಾದ ಪಾರ್ವತಿ, ಮಾಧುರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
