
ಸಕಲೇಶಪುರ : ತಾಲ್ಲೂಕಿನಲ್ಲಿ ಖಾಲಿ ಇರುವ ತಹಸೀಲ್ದಾರ್ ಹುದ್ದೆಗೆ, ಅನುಭವ ಇರುವ ಕಂದಾಯ ಇಲಾಖೆಯಲ್ಲಿ ಪರಿಣಿತರಿರುವ, ಮೂಲತಃ ಕಂದಾಯ ಇಲಾಖೆಯವರನ್ನೇ ನೇಮಕ ಮಾಡಬೇಕಾಗಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ (ರಿ ) ಗೌರವ ಕಾರ್ಯದರ್ಶಿ ಲೋಹಿತ್ ಕೌಡಳ್ಳಿ ಮನವಿ ಮಾಡಿದ್ದಾರೆ.
ಸಕಲೇಶಪುರ ತಾಲ್ಲೂಕು ಬೌಗೋಳಿಕವಾಗಿ ತುಂಬಾ ದೊಡ್ಡದಾದ ಕ್ಷೇತ್ರವಾಗಿದ್ದು, ಗುಡ್ಡಗಾಡುಗಳಿಂದ ಕೂಡಿದ್ದು ತಾಲ್ಲೂಕು ಆಡಳಿತ ಕೇಂದ್ರಕ್ಕೆ ಹಳ್ಳಿಗಳಿಂದ ಬರಲು ಸುಮಾರು 35–40 ಕಿ ಮೀ ಇಂದ ಬರಬೇಕಾದ ಅನಿವಾರ್ಯವಿದೆ ಸಕಲೇಶಪುರದಲ್ಲಿ ಸರ್ವೇ ಕಚೇರಿ, ಸಬ್ ರಿಜಿಸ್ಟರ್ ಕಚೇರಿ, ಕಸಬಾ ಕಚೇರಿ ಹೀಗೆ ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಹಲವಾರು ಕಚೇರಿಗಳು ಮಿನಿ ವಿಧಾನ ಸೌದದ ಕಟ್ಟಡ ಬಿಟ್ಟು ಹೊರಗಡೆ ಇದ್ದು, ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಭೇಟಿ ಮಾಡುವುದು ಕಷ್ಟಕರವಾಗಿದೆ.
ಸಕಲೇಶಪುರ ತಾಲ್ಲೂಕಿಗೆ ಸಂಬಂಧಪಟ್ಟ ಹಾಗೆ ಕಂದಾಯ ಇಲಾಖೆಯಲ್ಲಿ ಪೋಡಿ, ದುರಸ್ಥಿ, ಒತ್ತುವರಿ, ಧಾರಕಸ್, 94C ಹಕ್ಕು ಪತ್ರ ಗಳು ವಿದ್ಯಾರ್ಥಿಗಳಿಗೆ ಆದಾಯ, ಜಾತಿ ದೃಡೀಕರಣ ಹಾಗೆ ಆಹಾರ ಇಲಾಖೆಗೆ ಸಂಬಂಧ ಪಟ್ಟ ವಿಚಾರಗಳು ಪಹಣಿ, ಮ್ಯೂಟೇಷನ್ ಹೀಗೆ ರೈತರು ಹಲವಾರು ವಿಚಾರಕ್ಕಾಗಿ ಸಕಲೇಶಪುರ ತಾಲ್ಲೂಕು ಕಚೇರಿಗೆ ಬರುವುದು ಅನಿವಾರ್ಯವಾಗಿದೆ.
ಈಗಾಗಲೇ ಸಕಲೇಶಪುರ ತಾಲೂಕು ಕಂದಾಯ ಇಲಾಖೆಯಲ್ಲಿ ಅನುಕಂಪದ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಹಲವಾರು ಕೇಸ್ ವರ್ಕರ್ ಗಳಿಗೆ ಕಂದಾಯ ವಿಚಾರಗಳ ಅನುಭವದ ಕೊರತೆ ಇದ್ದು, ರೈತರು ತಮ್ಮ ಕೆಲಸಗಳನ್ನು ಮಾಡಿಕೊಳ್ಳಲ್ಲೂ ಹೈರಾಣಾಗಿ ಹೋಗಿದ್ದಾರೆ, ಇಂತಹ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅನುಭವ ಇಲ್ಲದ ವಿಧಾನ ಸೌಧದಲ್ಲಿ ಕೆಲಸ ಮಾಡುತ್ತಿರುವ ಯಾವುದೇ ತಹಸೀಲ್ದಾರ್ ಗ್ರೇಡ್ ಅಧಿಕಾರಿಯನ್ನು ತಂದು ಸಕಲೇಶಪುರ ತಹಸೀಲ್ದಾರ್ ಆಗಿ ಮಾಡಿದರೆ, ಅವರು ಕೆಲಸ ಕಲಿಯಲು ಕನಿಷ್ಠ ಒಂದು ವರ್ಷ ಅವಧಿಯದರೂ ಬೇಕಾಗಿದ್ದು ಒಂದು ವರ್ಷ ಅವಧಿ ನಂತರ ಮತ್ತೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಾರೆ ಹಾಗಾಗಿ ಮತ್ತೊಮ್ಮೆ ಸಕಲೇಶಪುರದ ರೈತರು ತೊಂದರೆ ಪಡಬೇಕಾಗುತ್ತದೆ, ಹಾಗಾಗಿ ದಯಮಾಡಿ ಮೂಲ ಕಂದಾಯ ಇಲಾಖೆಯ ಅಧಿಕಾರಿಯನ್ನು ನೇಮಿಸಬೇಕಾಗಿ ಕಂದಾಯ ಸಚಿವರಲ್ಲಿ ಮನವಿ ಮಾಡಿದ್ದಾರೆ.
