
ಹೊಸ ಓದುಗರಿಗೆ ಕುವೆಂಪು ಕುವೆಂಪು ಬರಹಗಳು ಮತ್ತು ಭಾಷಣಗಳ ಬಗ್ಗೆ ಕೆ.ವಿ ನಾರಾಯಣ
ಕೃತಿಯೊಂದನ್ನು ಕೃತಿ ರಚನೆಯಾದ ದೇಶಕಾಲ ಮತ್ತು ಕೃತಿಕಾರರ ಬದುಕು ಇವುಗಳನ್ನು ಬಿತ್ತಿಯಾಗಿಸಿಕೊಂಡು ಓದುವ ಬಗೆಯೊಂದಿದೆ. ಇದಕ್ಕೆ ಎದುರಾಗಿ ಯಾರು ಓದುತ್ತಿದ್ದಾರೋ ಅವರು ತಮ್ಮ ದೇಶಕಾಲದ ನೆಲೆಯಲ್ಲಿ ಕೃತಿಯನ್ನು ಓದುವುದು ಲೇಸು ಎನ್ನುವ ಇನ್ನೊಂದು ಬಗೆ ಇದೆ. ಇವೆರಡೂ ಪರಸ್ಪದ ಎದುರಾಳಿಗಳೆಂದು ತಿಳಿಯಬೇಕಿಲ್ಲ ಒಂದು ಇನ್ನೊಂದಕ್ಕೆ ಪೂರಕವೂ ಆಗಬಹುದು ಈ ಸಂಕಲನದಲ್ಲಿ ಸೇರಿಕೊಂಡಿರುವ ‘ಕುವೆಂಪು ಸಾಹಿತ್ಯವನ್ನು ಈಗ ಏಕೆ ಓದಬೇಕು’ ಎಂಬ ಬರಹದಲ್ಲಿ ‘ಕುವೆಂಪು ಬರಹಗಳು ಅವರಿಂದ ಬಿಡುಗಡೆ ಪಡೆದು ಸ್ವತಂತ್ರಗೊಳ್ಳಬೇಕು ಅವರ ಮೂಲಕ ಅವರ ಕೃತಿಗಳನ್ನು ಓದಬೇಕೆಂಬ ಒತ್ತಾಯದಿಂದ ಹೊರಬರಬೇಕು. ಕುವೆಂಪು ಹೆಸರು ಕೇವಲ ನೆಪವಾಗಬೇಕು’ ಎಂಬ ಮಾತಿದೆ. ಈ ಬರಹ ಅಚ್ಚಾದಾಗ ಅದನ್ನು ಓದಿದ ಕೆಲವರು ಗೆಳೆಯರು ಕೊಂಚ ವಿಚಲಿತರಾದರು.
ಹೀಗೆ ಕೃತಿಕಾರರನ್ನು ಹಿನ್ನೆಲೆಗೆ ತಳ್ಳುವ ಓದು ಅಧಿಕೃತವಾಗಲಾರದು ಎಂಬುದು ಅವರ ನಿಲುವು ಅವರ ನಿಲುವನ್ನು ನಾನು ಇಡಿಯಾಗಿ ನಿರಾಕರಿಸಲಾರೆ. ಆದರೆ ನನ್ನ ಗಮನವೆಲ್ಲ ಈ ಶತಮಾನದಲ್ಲಿ ಓದಲು ಮೊದಲು ಮಾಡಿರುವ ಹಾಗೂ ಮುಂದೆ ಓದಲಿರುವ ಓದುಗರನ್ನು ಕುರಿತಿದೆ.
