
ಹಾಸನ: ಮುಂದಿನ ದಿನಗಳಲ್ಲಿ ಮನೆಮನೆಗೆ ಅಗ್ನಿಹೋತ್ರ ಮತ್ತು ಯೋಗಾಭ್ಯಾಸ ತಲುಪಿಸಿ, ‘ಯೋಗಾಮಯ ಕರ್ನಾಟಕ’, ‘ಯೋಗಯುಕ್ತ ಕರ್ನಾಟಕ’ ಹಾಗೂ ‘ರೋಗಮುಕ್ತ ಕರ್ನಾಟಕ’ ನಿರ್ಮಾಣಕ್ಕೆ ಪತಂಜಲಿ ಯೋಗ ಪೀಠದಿಂದ ಚಾಲನೆ ನೀಡಲಾಗುತ್ತದೆ ಎಂದು ಪತಂಜಲಿ ಯೋಗ ಪೀಠದ ವರಿಷ್ಠ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಹೇಳಿದರು.
ನಗರದ ಹಾಸನಾಂಬೆ ದೇವಾಲಯ ರಸ್ತೆಯಲ್ಲಿ ಇರುವ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯ ಆವರಣದಲ್ಲಿ ಪತಂಜಲಿ ಯೋಗ ಸಮಿತಿ, ವೇದಭಾರತೀ ಹಾಗೂ ದೇವಸ್ಥಾನದ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ “ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಅಗ್ನಿಹೋತ್ರ ಮತ್ತು ಅಗ್ನಿಹೋತ್ರ ಕಾರ್ಯಾಗಾರ” ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪತಂಜಲಿ ಯೋಗ ಪೀಠ ಪರಿವಾರದಿಂದ ೧೦೮ ಕುಂಡಗಳಲ್ಲಿ ಅಗ್ನಿಹೋತ್ರ ಕಾರ್ಯಕ್ರಮ ಆಯೋಜಿಸಲಾಗಿದೆ.
ಇದರ ಮುಖ್ಯ ಉದ್ದೇಶ ಸಾಮಾನ್ಯ ಜನರಲ್ಲಿ ಅಗ್ನಿಹೋತ್ರದ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸುವುದಾಗಿದೆ. ಅಗ್ನಿಹೋತ್ರವು ಕೇವಲ ಒಂದು ಧಾರ್ಮಿಕ ವಿಧಿ ಮಾತ್ರವಲ್ಲ; ಇದು ಪಂಚಭೂತಗಳ ಶುದ್ಧೀಕರಣದ ಮೂಲಕ ಮಾನವ ಮನಸ್ಸು, ಭಾವನೆ ಹಾಗೂ ಆತ್ಮವನ್ನು ಶುದ್ಧಗೊಳಿಸುವ ವೈಜ್ಞಾನಿಕ ಕ್ರಿಯೆಯಾಗಿದ್ದು, ಯಾರೂ ತಮ್ಮ ಮನೆಯಲ್ಲಿ ದಿನನಿತ್ಯ ಮಾಡಬಹುದಾದ ಉತ್ತಮ ಪರಂಪರೆ ಎಂದರು.
ಈ ಅಗ್ನಿಹೋತ್ರದ ಪ್ರಭಾವ ಸುಮಾರು ಮೂರು ಕಿಲೋಮೀಟರ್ ವ್ಯಾಪ್ತಿಯವರೆಗೆ ವಾತಾವರಣವನ್ನು ಶುದ್ಧಗೊಳಿಸುತ್ತದೆ. ಕೇವಲ ೫೦ ರೂಪಾಯಿಗಳ ಖರ್ಚಿನಲ್ಲಿ ಕುಟುಂಬ ಸದಸ್ಯರು ಮನೆಯಲ್ಲಿ ಈ ಹೋಮವನ್ನು ನೆರವೇರಿಸಬಹುದು. ಇದು ಯಾವುದೇ ಜಾತಿ, ಧರ್ಮ ಅಥವಾ ಪಂಥಕ್ಕೆ ಸೀಮಿತವಲ್ಲ. ಮಾನವೀಯ ಹಿತಾಸಕ್ತಿಗಾಗಿ, ಎಲ್ಲರಿಗೂ ಲಾಭಕಾರಿ ಸಾಧನೆ. ಇತ್ತೀಚೆಗೆ ಹಾಸನದಲ್ಲೇ ಅನೇಕ ಯುವಕರು ಅಕಾಲಿಕ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇದೇ ಹಿನ್ನೆಲೆ ‘ಹೃದಯಕ್ಕಾಗಿ ಯೋಗ’ ಶಿಬಿರವನ್ನು ಆಯೋಜಿಸಿದ್ದೆವು. ಯೋಗಾಭ್ಯಾಸದಿಂದ ದೇಹದ ಶಕ್ತಿ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ಶಾಲೆಗಳಿಂದಲೇ ಮಕ್ಕಳಲ್ಲಿ ಯೋಗ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ ಪತಂಜಲಿ ಯೋಗ ಪೀಠ ಶ್ರಮಿಸುತ್ತಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ಅಗ್ನಿಹೋತ್ರದ ಕಾರ್ಯಾಚರಣೆ ಆರಂಭವಾಗಲಿದೆ. ಹಾಸನದಿಂದಲೇ ಇದರ ಅಧಿಕೃತ ಚಾಲನೆ ದೊರೆತಿದ್ದು, ಇದಕ್ಕಾಗಿ ಜಿಲ್ಲೆಯ ಹರಿಹರಪುರದ ಶ್ರೀಧರ್ ಅವರಿಗೆ ರಾಜ್ಯಮಟ್ಟದ ಅಗ್ನಿಹೋತ್ರ ಪ್ರಭಾರಿಯಾಗಿ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದರು.
ಅಗ್ನಿಹೋತ್ರದ ವೈಜ್ಞಾನಿಕ ಅಂಶಗಳ ಕುರಿತು ವೇದಭಾರತಿಯ ತಜ್ಞರು ಮಾಹಿತಿ ನೀಡಿದರು. ಹೋಮದ ನಂತರ ಹಾಜರಿದ್ದ ನಾಗರಿಕರು “ಓಂಕಾರದ ಶಕ್ತಿ” ಪಾಠದಲ್ಲಿ ಭಾಗವಹಿಸಿದರು. ಯೋಗಾಭ್ಯಾಸದ ಮೂಲಕ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶುದ್ಧೀಕರಣ ಸಾಧ್ಯವೆಂಬ ಸಂದೇಶ ಕಾರ್ಯಕ್ರಮದ ಕೇಂದ್ರಬಿಂದು ಆಗಿತ್ತು. ಪತಂಜಲಿ ಯೋಗ ಸಮಿತಿಯ ಕಾರ್ಯಕರ್ತರು ಕಾರ್ಯಕ್ರಮದ ಆಯೋಜನೆ, ಕುಂಡ ನಿರ್ಮಾಣ, ಹೋಮ ಸಾಮಗ್ರಿಗಳ ಸಿದ್ಧತೆ ಹಾಗೂ ಸರ್ವಜನಾಂಗದ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿದರು.
ಕಾರ್ಯಕ್ರಮ ಅಂತ್ಯದಲ್ಲಿ ಎಲ್ಲರಿಗೂ ಪ್ರಸಾದ ಹಾಗೂ ಅಗ್ನಿಹೋತ್ರದ ಉಪಕರಣಗಳ ಕಿಟ್ ವಿತರಿಸಲಾಯಿತು. ಇದೆ ವೇಳೆ ಸತ್ಸಂಗ ಹೇಳಿಕೊಡಲಾಯಿತು.
ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಪೀಠದ ರಾಜ್ಯ ಯಜ್ಞ ಪ್ರಭಾರಿ ಮತ್ತು ವೇದಭಾರತಿಯ ರಾಜ್ಯ ಸಂಯೋಜಕ ಹರಿಹರಪುರ ಶ್ರೀಧರ್, ಜಿಲ್ಲಾ ಸಂರಕ್ಷಕ ಲೋಕನಾಥ್, ಮಹಿಳಾ ಜಿಲ್ಲಾ ಪ್ರಭಾರಿ ಶಾರದಾ ಧರ್ಮಾನಂದ್, ಯೋಗ ಪಟು ನಾಗರಾಜು, ಹೇಮಂತ್ ಕುಮಾರ್, ಸುರೇಶ್ ಪ್ರಜಾಪತಿ, ದೊರೆಸ್ವಾಮಿ, ಕೇಶವಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
