ಹಾಸನ: ಜಿಲ್ಲಾಧಿಕಾರಿ ಕಚೇರಿಗೆ ಐದು ಕಡೆ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ನೀಡಿದ ಇ-ಮೇಲ್ ಸೋಮವಾರ ಸಂಜೆ ಹಾಸನ ನಗರದಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತು.

ಗದಗ, ಮಂಗಳೂರು, ಹಾಸನ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಗೆ ಒಂದೇ ರೀತಿಯ ಬೆದರಿಕೆ ಸಂದೇಶ ಕಳುಹಿಸಲಾಗಿದ್ದು, ಹಾಸನ ಡಿಸಿ ಕಚೇರಿಗೂ “ಅರ್ನಾ ಅಶ್ವಿನ್ ಶೇಖರ್” ಎಂಬ ಹೆಸರಿನ ಮೂಲಕ ಮೇಲ್ ಬಂದಿದೆ.

ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಅಧಿಕಾರಿಗಳ ಸಭೆ ನಡೆಸುತ್ತಿದ್ದ ವೇಳೆ ಮೇಲ್ ಗಮನಕ್ಕೆ ಬಂದಿದ್ದು, ತಕ್ಷಣವೇ ಅದರ ಪ್ರಿಂಟೌಟ್ ಪಡೆದು ಎಫ್‌ಐಆರ್ ದಾಖಲಿಸಲು ಉಪವಿಭಾಗಾಧಿಕಾರಿ ಎ.ಸಿ. ಜಗದೀಶ್ ಗಂಗಣ್ಣವರ್ ಅವರಿಗೆ ಸೂಚಿಸಿದರು.

ಡಿಸಿ ಆದೇಶದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ತಕ್ಷಣ ಕಾರ್ಯಪ್ರವೃತ್ತರಾದ ಹಾಸನ ಡಿವೈಎಸ್‌ಪಿ ಗಂಗಾಧರಪ್ಪ ನೇತೃತ್ವದ ಪೊಲೀಸ್ ತಂಡ, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಡಿಸಿ ಚೇಂಬರ್ ಸೇರಿ ಕಚೇರಿಯ ಪ್ರಮುಖ ಭಾಗಗಳಲ್ಲಿ ಸೂಕ್ಷ್ಮ ತಪಾಸಣೆ ನಡೆಸಿತು.

ಆದರೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ಇದೊಂದು ಹುಸಿ ಬಾಂಬ್ ಬೆದರಿಕೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಇ-ಮೇಲ್‌ನಲ್ಲಿ ತಮಿಳುನಾಡಿನ ಎಲ್‌ಟಿಟಿಇ ಕಾರ್ಯಕರ್ತರು ಹಾಗೂ ಪಾಕಿಸ್ತಾನ ಐಎಸ್‌ಐ ಉಲ್ಲೇಖಿಸಿರುವುದು ಗಮನ ಸೆಳೆದಿದೆ. ತಮಿಳುನಾಡು ಚುನಾವಣಾ ಸಂದರ್ಭದಲ್ಲಿ ಗೊಂದಲ ಸೃಷ್ಟಿಸಲು ಇಂತಹ ಬೆದರಿಕೆ ಪ್ರಯತ್ನವಾಗಿರಬಹುದೆಂಬ ಅನುಮಾನವೂ ಮೂಡಿದೆ.

ಗಮನಾರ್ಹ ಅಂಶವೆಂದರೆ, ತಪಾಸಣೆಗಾಗಿ ಸಭೆ ಸ್ಥಗಿತಗೊಳಿಸುವಂತೆ ಮನವಿ ಮಾಡಿದರೂ ಜಿಲ್ಲಾಧಿಕಾರಿ ಲತಾಕುಮಾರಿ ಸಭೆಯನ್ನು ಮುಂದುವರೆಸಿದರು.

ಪೊಲೀಸರು ಹಾಗೂ ಬಾಂಬ್ ದಳ ಪರಿಶೀಲನೆ ನಡೆಸುತ್ತಿದ್ದ ನಡುವೆಯೂ ಸಭೆ ಮುಂದುವರೆಯಿತು, ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ವೇಳೆ ಬಾಂಬ್ ಬೆದರಿಕೆ ಬಗ್ಗೆ ಡಿಸಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *