
ಸಕಲೇಶಪುರ : ತಾಲೂಕಿನ ಕುರಭತ್ತೂರು ಗ್ರಾಮ ಪಂಚಾಯಿತಿಯಲ್ಲಿ ಬೆಳಕು ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಮಾಸಿಕ ಸಂತೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಬಾರ್ಡ್ (National Bank for Agriculture and Rural Development) ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರಾದ ರೇಣುಕಾ ಶಿವಕುಮಾರ್ ಅವರು, ಸ್ವಸಹಾಯ ಸಂಘಗಳು ಖಾಸಗಿ ಬ್ಯಾಂಕ್ ಅಥವಾ ಸೂಕ್ಷ್ಮ ಹಣಕಾಸು ಸಂಸ್ಥೆಗಳ ಬದಲಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವಂತೆ ಸಲಹೆ ನೀಡಿದರು.
ಕೆನರಾ ಬ್ಯಾಂಕ್ ಶುಕ್ರವಾರಸಂತೆ ಶಾಖೆಯ ವ್ಯವಸ್ಥಾಪಕರಾದ ನವೀನ್ ಅವರು ಮಾತನಾಡಿ, ಸ್ವಸಹಾಯ ಸಂಘದ ಮಹಿಳೆಯರು ಏಂಜಲ್ ಖಾತೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ,ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಗಳನ್ನು ಕಡ್ಡಾಯವಾಗಿ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ಮಾಡಿಸುವಂತೆ ತಿಳಿಸಿದರು.
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ನಾಗೇಶ್ ಅವರು, ಸ್ವಸಹಾಯ ಸಂಘದ ಸದಸ್ಯರು ಸಮುದಾಯ ಬಂಡವಾಳ ನಿಧಿಯನ್ನು ಸಾಲವಾಗಿ ಪಡೆದು ಆದಾಯೋತ್ಪಾದಕ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಕರೆ ನೀಡಿದರು. ಮಹಿಳೆಯರು ಉತ್ಪಾದಿಸುವ ಕೃಷಿ, ಕೃಷಿಯೇತರ ಹಾಗೂ ಆಹಾರ ಉತ್ಪನ್ನಗಳಿಗೆ ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಮಾಸಿಕ ಸಂತೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ಇದರ ಸದುಪಯೋಗ ಪಡೆದು ಮಾರಾಟ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಜೊತೆಗೆ ಆರ್ಥಿಕವಾಗಿ ಸಬಲೀಕರಣ ಸಾಧಿಸಬಹುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಧರ್ಮಪ್ಪ, ತಾಲೂಕು ವ್ಯವಸ್ಥಾಪಕರಾದ ಮಮತಾ, ವಲಯ ಮೇಲ್ವಿಚಾರಕರಾದ ರತನ್, ಒಕ್ಕೂಟದ ಪದಾಧಿಕಾರಿಗಳು, ಹಣಕಾಸು ಸಾಕ್ಷರತಾ ಕೇಂದ್ರದ ಗಂಗಾಧರ್, ಎಂ.ಬಿ.ಕೆ ದಿವ್ಯ, ಎಲ್.ಸಿ.ಆರ್.ಪಿ ಗಳು, ಕೃಷಿ ಮತ್ತು ಪಶುಸಖಿಯರು, ಸ್ವಸಹಾಯ ಸಂಘದ ಪ್ರತಿನಿಧಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
