ಸಕಲೇಶಪುರ : ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಗೌರವಯುತ ಸ್ಥಾನಮಾನ, ಸಮಾನತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ದೊರಕಲು ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಭಾರತದ ಸಂವಿಧಾನವೇ ಮೂಲ ಕಾರಣ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಗುರುವಾರ ತಾಲೂಕಿನ ಬಾಳ್ಳುಪೇಟೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ 135ನೇ ಅಂಬೇಡ್ಕರ್ ಜಯಂತಿ ಭೀಮೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.“ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಅವಕಾಶಗಳು ಸಿಗಬೇಕು ಎಂಬ ಸಂದೇಶವನ್ನು ಭಾರತೀಯ ಸಂವಿಧಾನ ಸಾರುತ್ತದೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಮಹಿಳೆಯರಿಗೆ ಸಮಾನ ಹಕ್ಕುಗಳು ದೊರೆತಿದ್ದು, ಇಂದಿನ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಅವಕಾಶ ಸಿಕ್ಕಿದೆ. ಮಹಿಳೆಯರು ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವುದು ಅಂಬೇಡ್ಕರ್ ಅವರ ದೂರದೃಷ್ಟಿಯ ಫಲ” ಎಂದು ಹೇಳಿದರು.

“ಭಾರತೀಯ ಸಮಾಜದಲ್ಲಿ ಮಹಿಳೆಯರನ್ನು ಸಂಕೋಲೆಗಳಿಂದ ಬಿಡುಗಡೆಗೊಳಿಸಿ ಅವರಿಗೆ ಸ್ವಾತಂತ್ರ್ಯ ಹಾಗೂ ಸಮಾನತೆಯ ತತ್ವಗಳನ್ನು ಸಂವಿಧಾನಾತ್ಮಕವಾಗಿ ದೊರಕಿಸಿಕೊಡುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆಯನ್ನು ಯಾರೂ ಮೀರಿಸಲು ಸಾಧ್ಯವಿಲ್ಲ. ಅವರ ಸೇವೆಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ” ಎಂದರು.

ಅಕ್ಕ ಐಎಎಸ್ ಅಕಾಡೆಮಿಯ ನಿರ್ದೇಶಕ ಶಿವಕುಮಾರ್ ಮಾತನಾಡಿ, “ಅಂಬೇಡ್ಕರ್ ಅವರ ಬಗ್ಗೆ ಅಭಿಮಾನ ಹೆಚ್ಚಾಗಿದೆ. ಆದರೆ ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮನೋಭಾವ ಕಡಿಮೆಯಾಗಿದೆ. ಅವರ ಚಿಂತನೆಗಳನ್ನು ಅರ್ಥ ಮಾಡಿಕೊಂಡು ಅನುಸರಿಸಿದಾಗ ಮಾತ್ರ ಜೀವನ ಪರಿಪೂರ್ಣವಾಗುತ್ತದೆ” ಎಂದರು.

“ಅಂಬೇಡ್ಕರ್ ಅವರ ಕನಸು ನನಸಾಗಲಿಲ್ಲ ಎಂದು ಹೇಳುವ ಮೊದಲು, ಅವರ ಕನಸು ಏನು ಎಂಬುದನ್ನು ಅರಿಯಬೇಕು. ಸಮಾಜದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಜ್ಞಾನ ಅತ್ಯಗತ್ಯ. ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ನಿರ್ಮಿಸಬೇಕು. ಒಂದು ಊರಿನ ಘನತೆ-ಗೌರವ ಹೆಚ್ಚಾಗುವುದು ಆ ಊರಿನಲ್ಲಿ ಎಷ್ಟು ಸಾಧಕರು ರೂಪುಗೊಳ್ಳುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ” ಎಂದು ಹೇಳಿದರು.

ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, “ಅಂಬೇಡ್ಕರ್ ಅವರು ನೀಡಿದ ‘ಶಿಕ್ಷಿತರಾಗಿ, ಸಂಘಟಿತರಾಗಿ, ಹೋರಾಡಿ’ ಎಂಬ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಮನೆಯಲ್ಲಿರುವ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿ” ಎಂದು ಹೇಳಿದರು.

ಇದೇ ವೇಳೆ ಅಂಬೇಡ್ಕರ್ ನಗರದಲ್ಲಿರುವ ಕೆರೆಯನ್ನು ಶಾಸಕ ಸಿಮೆಂಟ್ ಮಂಜು ಅವರ ಅನುದಾನದಲ್ಲಿ ಪುನಶ್ಚೇತನಗೊಳಿಸಿರುವುದಕ್ಕೆ ಅಭಿನಂದನೆ ಸಲ್ಲಿಸಲಾಯಿತು.

ಮುಂದಿನ ಹಂತದಲ್ಲಿ ಕೆರೆಯ ಸುತ್ತಮುತ್ತ ಗಿಡಮರಗಳನ್ನು ನೆಟ್ಟು ಪಾರ್ಕ್ ನಿರ್ಮಾಣಕ್ಕೆ ಅನುದಾನ ನೀಡುವಂತೆ ಸಂಸದರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ಬಿ.ಆರ್. ಗುರುದೇವ್, ಕರ್ನಾಟಕ ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಅಣ್ಣಯ್ಯ ಹೆತ್ತೂರು, ಬಿಎಸ್‌ಪಿ ಜಿಲ್ಲಾಧ್ಯಕ್ಷ ಲಕ್ಷಣ ಕೀರ್ತಿ,ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಾಳ್ಳು ಗೋಪಾಲ್, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಧರ್ಮಗುರು ಸುಲೈಮಾನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed