
ಸಕಲೇಶಪುರ : ಬುಧವಾರ ಪುರಸಭೆ ಕಚೇರಿಯಿಂದ ಉಪವಿಭಾಗಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ನೌಕರರಿಗೆ ರಕ್ಷಣೆ ಒದಗಿಸಬೇಕು, ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ತಹಸೀಲ್ದಾರ್ ಸುಪ್ರೀತಾ ಹಾಗೂ ಉಪವಿಭಾಗಾಧಿಕಾರಿ ಕಚೇರಿಯ ವ್ಯವಸ್ಥಾಪಕ ಯೋಗೇಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕಳೆದ ಮೇ 15ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ರೀತಂ, ಅಗ್ರಹಾರ ಸುದೀಪ್ ಹಾಗೂ ಭರತ್ ಎಂಬುವವರು ಗುಂಪು ಕಟ್ಟಿಕೊಂಡು ಪುರಸಭೆ ಕಚೇರಿಗೆ ನುಗ್ಗಿ ಶಾಖೆಯಲ್ಲಿ ಕರ್ತವ್ಯ ನಿರತ ಸಮುದಾಯ ಸಂಘಟನಾಧಿಕಾರಿ ನಟರಾಜ್ ಸೇರಿದಂತೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳ ಮೇಲೆ ಚಪ್ಪಲಿ ತೋರಿಸಿ ಬೆದರಿಕೆ ಹಾಕಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.
ಬಳಿಕ ಆಡಳಿತ ವಿಭಾಗದಲ್ಲಿಯೂ ಅನಾವಶ್ಯಕವಾಗಿ ಕೂಗಾಡಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರು. ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.ಪ್ರತಿಭಟನೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ, ಪುರಸಭಾ ಅಧಿಕಾರಿ ಶ್ರೀನಿವಾಸ್, ಪುರಸಭೆ ವ್ಯವಸ್ಥಾಪಕ ಮಹೇಶ್, ಸಮುದಾಯ ಸಂಘಟನಾ ಅಧಿಕಾರಿ ನಟರಾಜ್, ಕಂದಾಯ ಅಧಿಕಾರಿ ಮಂಜೇಗೌಡ, ಜೆಇ ಸಚಿನ್, ನೌಕರರ ಸಂಘದ ಕಾರ್ಯದರ್ಶಿ ಬಸವರಾಜ, ಸಿಬ್ಬಂದಿಗಳಾದ ಸುಂದರೇಶ್ , ಗಂಗಾಧರ್, ರೇವಣ್ಣ, ವರದರಾಜು, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
