ಸಕಲೇಶಪುರ : ಶಿಕ್ಷಣ ಎಂಬುದು ಕೇವಲ ಉದ್ಯೋಗ ಪಡೆಯಲು ಅಥವಾ ಹಣ ಸಂಪಾದನೆಗಾಗಿ ಮಾತ್ರ ಸೀಮಿತವಾಗಬಾರದು. ವ್ಯಕ್ತಿಯ ಜೀವನಕ್ಕೆ ದಿಕ್ಕು ತೋರಿಸಿ, ಸಂಸ್ಕಾರ, ಮಾನವೀಯತೆ, ಶಿಸ್ತು ಹಾಗೂ ಸಮಾಜದ ಜವಾಬ್ದಾರಿಯನ್ನು ಅರಿವು ಮಾಡಿಸುವುದೇ ನಿಜವಾದ ಶಿಕ್ಷಣದ ಉದ್ದೇಶ ಎಂದು ಹೆಗ್ಗಡಹಳ್ಳಿ ಶ್ರೀಮಠದ ಶ್ರೀ ಷ|| ಬ್ರ|| ಪ।। ಷಡ್ಡಾವರಹಿತೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇಕಡಾ 90ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಹಾಗೂ ಎಸ್‌ಎಸ್‌ಎಲ್‌ಸಿ ಕನ್ನಡ ಐಚ್ಛಿಕ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸುವ ಉದ್ದೇಶದಿಂದ “ವೈಚಾರಿಕ ಸಂಜೆ” ದಿನಪತ್ರಿಕೆ ವತಿಯಿಂದ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದಿವ್ಯ ಆಶೀರ್ವಚನ ನೀಡಿ ಅವರು ಮಾತನಾಡಿದರು.

ಉದ್ಯೋಗ ಜೀವನಕ್ಕೆ ಅಗತ್ಯವಾದರೂ, ಶಿಕ್ಷಣದ ಮೌಲ್ಯ ಅದಕ್ಕಿಂತ ಬಹಳ ದೊಡ್ಡದು. ಶಿಕ್ಷಣದಿಂದ ಜ್ಞಾನ, ಆತ್ಮವಿಶ್ವಾಸ ಹಾಗೂ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಯುತ್ತದೆ. ಶಿಕ್ಷಣ ಪಡೆದ ವ್ಯಕ್ತಿ ತನ್ನ ಕುಟುಂಬಕ್ಕೂ ಸಮಾಜಕ್ಕೂ ಮಾದರಿಯಾಗುತ್ತಾನೆ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣವನ್ನು ಕೇವಲ ದುಡಿಮೆಗೆ ಸೀಮಿತಗೊಳಿಸದೇ ಉತ್ತಮ ವ್ಯಕ್ತಿತ್ವ ಮತ್ತು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ವಿದ್ಯಾರ್ಥಿ ಜೀವನದಲ್ಲಿ ಬದ್ಧತೆ, ಸ್ಪಷ್ಟತೆ, ಏಕಾಗ್ರತೆ ಹಾಗೂ ಶಿಸ್ತು ಮುಖ್ಯವೆಂದು ತಿಳಿಸಿದ ಅವರು, “ನಮ್ಮ ಜೀವನದಲ್ಲಿ ಯಶಸ್ಸು ಸಾಧಿಸಲು ಐದು ಸೂತ್ರಗಳು ಅಗತ್ಯ. ಮೊದಲನೆಯದು ಬದ್ಧತೆ. ನಾವು ಏನಾಗಬೇಕು ಎಂಬುದರ ಬಗ್ಗೆ ಸ್ಪಷ್ಟ ಗುರಿ ಇರಬೇಕು. ಎರಡನೆಯದು ಗೊಂದಲದಿಂದ ದೂರ ಇರಬೇಕು. ಸುತ್ತಮುತ್ತಲಿನ ಒತ್ತಡಗಳಿಗೆ ಒಳಗಾಗದೆ ಗುರುಗಳ ಮಾರ್ಗದರ್ಶನದಲ್ಲಿ ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಬೇಕು. ಮೂರನೆಯದು ಏಕಾಗ್ರತೆ. ಇಂದಿನ ಆಧುನಿಕ ಜೀವನಶೈಲಿ ವಿದ್ಯಾರ್ಥಿಗಳ ಗಮನವನ್ನು ಬೇರೆಡೆ ಸೆಳೆಯುತ್ತಿದೆ. ಆದ್ದರಿಂದ ಓದಿನತ್ತ ಸಂಪೂರ್ಣ ಮನಸ್ಸು ಕೇಂದ್ರೀಕರಿಸಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

“ಎಲ್ಲರೂ ಒಂದೇ ಕೋರ್ಸ್ ಅಥವಾ ಹೆಚ್ಚು ಸಂಬಳ ಸಿಗುವ ಉದ್ಯೋಗಗಳ ಹಿಂದೆ ಓಡಬಾರದು. ನಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಎಂಬುದನ್ನು ಅರಿತು ಅದರತ್ತ ಸಾಗಬೇಕು. ತಂದೆ-ತಾಯಿಗಳ ಕಷ್ಟ, ಶಿಕ್ಷಕರ ಮಾರ್ಗದರ್ಶನ ಹಾಗೂ ಹಿರಿಯರ ಆಶೀರ್ವಾದವನ್ನು ಗೌರವಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು” ಎಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರತಿಭಾ ಮಂಜುನಾಥ್, “ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ವೈಚಾರಿಕ ಸಂಜೆ ದಿನಪತ್ರಿಕೆ ಕೈಗೊಂಡಿರುವುದು ಶ್ಲಾಘನೀಯ. ಪ್ರತಿಯೊಬ್ಬ ವಿದ್ಯಾರ್ಥಿಗೂ ತನ್ನದೇ ಆದ ಪ್ರತಿಭೆ ಇರುತ್ತದೆ. ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಗಳ ಕಷ್ಟವನ್ನು ಅರಿತು ಶ್ರಮಪಟ್ಟು ಓದಿ ಅವರ ಕನಸು ನನಸು ಮಾಡಬೇಕು” ಎಂದರು.

ತಾಲೂಕಿನ ನವಮಿ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿ ಉದಾಹರಣೆ ನೀಡಿ ಮಾತನಾಡಿದ ಅವರು, “ಟ್ಯೂಷನ್‌ಗೆ ಅವಲಂಬಿಸದೇ ಮನೆಯಲ್ಲಿಯೇ ಶ್ರಮಪಟ್ಟು ಓದಿದ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳು ದಿನನಿತ್ಯ ಪಾಠಗಳನ್ನು ಅಂದಿನಂದೇ ಅಭ್ಯಾಸ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಜೊತೆಗೆ ಪೋಷಕರು ಮಕ್ಕಳ ವಿದ್ಯಾಭ್ಯಾಸ ಹಾಗೂ ದೈನಂದಿನ ಚಟುವಟಿಕೆಗಳ ಬಗ್ಗೆ ಗಮನಹರಿಸಬೇಕು” ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂಚಾಲ ಕುಮಾರಸ್ವಾಮಿ ಮಾತನಾಡಿ, “ಈ ರೀತಿಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಮತ್ತಷ್ಟು ಸಾಧನೆಗೆ ಪ್ರೇರಣೆ ನೀಡುತ್ತವೆ. ಪತ್ರಿಕೆಗಳು ಕೇವಲ ಸುದ್ದಿಗಳನ್ನು ಪ್ರಕಟಿಸುವುದಲ್ಲದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೈಚಾರಿಕ ಸಂಜೆ ದಿನಪತ್ರಿಕೆಯ ಸಂಪಾದಕ ಬ್ಯಾಕರವಳ್ಳಿ ವೆಂಕಟೇಶ್ ಮಾತನಾಡಿ, “ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಸಾಧನೆ ಇತರ ಮಕ್ಕಳಿಗೂ ಪ್ರೇರಣೆಯಾಗಬೇಕು ಎಂಬ ಆಶಯ ನಮ್ಮದು” ಎಂದರು.

ವೇದಿಕೆಯಲ್ಲಿ ಸಮಾಜ ಸೇವಕರಾದ ಕಟ್ಟೆಗದ್ದೆ ನಾಗರಾಜ್, ಹೆತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರು ನೇತ್ರ ಸುರೇಶ್, ಹೆತ್ತೂರು, ಯಸಳೂರು ಕೃಷಿ ಇಲಾಖೆಯ ಅಧಿಕಾರಿ ಕೇಶವಮೂರ್ತಿ, ಸಾಹಿತಿ ಸುಹಾಸ್ ಗೌಡ, ಕಿತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರವಿಕುಮಾರ್, ಕರವೇ ತಾಲೂಕು ಘಟಕದ ಅಧ್ಯಕ್ಷರಾದ ಗಗನ್ ಹಾಡ್ಲಹಳ್ಳಿ, ಹಾಸನ ಜಿಲ್ಲಾ ದ.ಸಂ.ಸ ಸಂಚಾಲಕರಾದ ಅರೆಹಳ್ಳಿ ಲಿಂಗರಾಜು ಇದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು, ಕನ್ನಡಾಭಿಮಾನಿಗಳು, ಕರವೇ ಸಕಲೇಶಪುರ ಘಟಕದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *