
ಸಕಲೇಸಪುರ : ಅಂದು ಪ್ರವಾದಿ ಇಬ್ರಾಹಿಂ (ಅಲೈಹಿಸ್ಸಲಾಂ) ಅವರು ದೇವರ ಆಜ್ಞೆಗೆ ಶಿರಬಾಗಿ, ಹೆತ್ತ ಕರಳು ಕುಡಿಯಾದ ಪುತ್ರ ಹಜರತ್ ಇಸ್ಮಾಯಿಲ್ (ಅಲೈಹಿಸ್ಸಲಾಂ) ಅವರನ್ನು ಅಲ್ಲಾನಿಗಾಗಿ ಬಲಿ ನೀಡಲು ಮುಂದಾದಾಗ, ಆ ಮಗನೂ ಕೂಡ ತಂದೆಯ ಕರ್ತವ್ಯಕ್ಕೆ ಹೆಗಲು ಕೊಟ್ಟು ತ್ಯಾಗಕ್ಕೆ ಸಿದ್ಧರಾಗಿದ್ದರು. ತಂದೆ-ಮಗನ ನಡುವಿನ ಆ ಪವಿತ್ರ ಪ್ರೀತಿ ಮತ್ತು ಸೃಷ್ಟಿಕರ್ತನ ಮೇಲಿನ ನಿಷ್ಠೆ ಇಸ್ಲಾಮಿನ ಅತ್ಯುನ್ನತ ತ್ಯಾಗದ ಸಂಕೇತವಾಗಿದೆ. ಆದರೆ ಇಂದಿನ ಯುಗದಲ್ಲಿ ಕೆಲವು ಯುವಕರು ಹೆತ್ತ ಪೋಷಕರಿಗೆ ಅಪಾರ ದುಃಖ, ಕಣ್ಣೀರು ಮತ್ತು ಸಮಾಜದಲ್ಲಿ ತಲೆ ತಗ್ಗಿಸುವಂತಹ ಪರಿಸ್ಥಿತಿ ತಂದೊಡ್ಡಿ, ಮಾರಕ ಡ್ರಗ್ಸ್ ಚಟಕ್ಕೆ ಬಲಿಯಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಸಕಲೇಶಪುರ ಜಾಮಿಯ ಮತ್ತು ಲಾಬಾಬಿನ್ ಮಸೀದಿಯ ಧರ್ಮಗುರುಗಳಾದ ಮೌಲಾನಾ ಮಹಮದ್ ತಲಾ ಖಾಸಿಮಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
ಸಕಲೇಶಪುರಪಟ್ಟಣದ ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯ ಸಂದರ್ಭದಲ್ಲಿ ವಿಶೇಷ ಪ್ರವಚನ ನೀಡಿದ ಅವರು, ಡ್ರಗ್ಸ್ ಸೇವನೆಯಿಂದ ಯುವ ಪೀಳಿಗೆ ಹೇಗೆ ಹಾದಿ ತಪ್ಪುತ್ತಿದೆ ಎಂಬುದನ್ನು ಮಾರ್ಮಿಕವಾಗಿ ವಿವರಿಸಿದರು.
“ಇಸ್ಲಾಂ ಧರ್ಮದಲ್ಲಿ ಬಲಿದಾನ ಎಂದರೆ ಕೇವಲ ಪ್ರಾಣಿಗಳನ್ನು ಕುರ್ಬಾನಿ ನೀಡುವುದು ಮಾತ್ರವಲ್ಲ. ಅದರೊಂದಿಗೆ ಮನುಷ್ಯನಲ್ಲಿರುವ ದುಷ್ಟ ಆಲೋಚನೆಗಳು, ಹೆತ್ತವರನ್ನು ನೋಯಿಸುವ ಕೆಟ್ಟ ಗುಣಗಳು ಮತ್ತು ಮಾದಕ ವ್ಯಸನಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಕೂಡ ಒಂದು ಶ್ರೇಷ್ಠ ಬಲಿದಾನವಾಗಿದೆ” ಎಂದು ಅವರು ಹೇಳಿದರು.
ಅಲ್ಲಾಹನ ಹೆಸರಿನಲ್ಲಿ ತಮಗೆ ಪ್ರಿಯವಾದದ್ದನ್ನು ತ್ಯಾಗ ಮಾಡುವುದಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ, ಅಷ್ಟೇ ಪ್ರಾಮುಖ್ಯತೆ ಸಮಾಜಕ್ಕೆ ಮಾರಕವಾಗಿರುವ ದುಷ್ಟ ಚಟಗಳನ್ನು ತ್ಯಜಿಸುವುದಕ್ಕೂ ಇದೆ ಎಂದು ತಿಳಿಸುವ ಮೂಲಕ ಯುವ ಪೀಳಿಗೆಯು ಡ್ರಗ್ಸ್ ವಿರುದ್ಧ ಆಂದೋಲನ ರೂಪಿಸಬೇಕೆಂದು ಕರೆ ನೀಡಿದರು.
“ಮಕ್ಕಳು ತಂದೆ-ತಾಯಿಯರ ವೃದ್ಧಾಪ್ಯದ ಕೋಲಾಗಬೇಕೇ ಹೊರತು, ಅವರ ಕಣ್ಣೀರಿಗೆ ಕಾರಣವಾಗಬಾರದು. ಮಾದಕ ವ್ಯಸನದಿಂದ ಕುಟುಂಬಗಳು ಅನುಭವಿಸುವ ನರಕಯಾತನೆ ಹಾಗೂ ಇಡೀ ಸಮಾಜದ ಮೇಲಾಗುವ ಭೀಕರ ದುಷ್ಪರಿಣಾಮಗಳ ಕುರಿತು ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳಬೇಕಿದೆ” ಎಂದು ಭಾವುಕರಾಗಿ ನುಡಿದರು.
ಇದೇ ಸಂದರ್ಭದಲ್ಲಿ ಈದ್ಗಾ ಮೈದಾನದಲ್ಲಿ ಧರ್ಮಗುರುಗಳಾದ ನಯಾಜ್ ಅಹಮದ್ ಖಾಸಿಮಿ ಅವರು ಬಕ್ರೀದ್ ಹಬ್ಬದ ವಿಶೇಷ ಸಾಮೂಹಿಕ ನಮಾಜ್ ಪ್ರಾರ್ಥನೆಯನ್ನು ನೆರವೇರಿಸಿಕೊಟ್ಟರು.
ಈ ಪವಿತ್ರ ಸಮೋಹಿಕ ಪ್ರಾರ್ಥನೆಯಲ್ಲಿ ಜಾಮಿಯಾ ಮಸೀದಿ ಅಧ್ಯಕ್ಷರಾದ ಜಾಫರ್ ಅಲಿ, ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ಮುಫೀಸ್ ಸೇರಿದಂತೆ ಊರಿನ ಪ್ರಮುಖರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.


