
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
“ದೇಶದ ಯುವಜನರು ಗೊಂದಲದ ಜಾಲದಲ್ಲಿ ಸಿಲುಕಿಕೊಳ್ಳಬಾರದು ಎಂದು ಖಚಿತಪಡಿಸಿಕೊಳ್ಳುವ ಸಲುವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಪ್ರಧಾನ್ ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
ಎರಡು ಪುಟಗಳ ರಾಜೀನಾಮೆ ಪತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನ್, “ನಮ್ಮ ಪ್ರಜಾಪ್ರಭುತ್ವದ ಶಕ್ತಿಯ ಬಗ್ಗೆ ತಮಗೆ ಯಾವಾಗಲೂ ಅಚಲ ನಂಬಿಕೆ ಇದೆ, ದೇಶದ ಯುವಕರ ಆಕಾಂಕ್ಷೆಗಳನ್ನು ಆಳವಾಗಿ ಗೌರವಿಸುತ್ತೇನೆ” ಎಂದು ಹೇಳಿದ್ದಾರೆ. ಜಂತರ್ ಮಂತರ್‌ನಲ್ಲಿನ ಪರಿಸ್ಥಿತಿಯನ್ನು ಉಲ್ಲೇಖಿಸಿ,
“ಕಳೆದ 10 ದಿನಗಳಿಂದ ನಡೆದ ಘಟನೆಗಳ ಬಗ್ಗೆ ನಾನು ದುಃಖಿತನಾಗಿದ್ದೇನೆ” ಎಂದು ಹೇಳಿದ್ದಾರೆ.ಜಂತರ್ ಮಂತರ್ ಮತ್ತು ದೇಶಾದ್ಯಂತದ ಪರಿಸ್ಥಿತಿಯ ಲಾಭ ಪಡೆಯಲು ರಾಷ್ಟ್ರವಿರೋಧಿ ಶಕ್ತಿಗಳಿಗೆ ಅವಕಾಶ ನೀಡಬಾರದು ಎಂದು ಅವರು ಹೇಳಿದರು.
