ಹಾಸನ, ಜು. ೨೮: ನಗರದ ಸ್ಟಾರ್ ಪ್ರೊ ಜಿಮ್ನಾಸ್ಟಿಕ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಇಬ್ಬರು ಪ್ರತಿಭಾವಂತ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದ ಅಕ್ರೋಬಾಟಿಕ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಅಕಾಡೆಮಿಯ ವಿದ್ಯಾರ್ಥಿಗಳಾದ ಹರ್ಷಾ ಜಿ. ಗೌಡ (ತಂದೆ: ಗೋಪಾಲ್ ಜಿ.ಆರ್.) ಹಾಗೂ ಪವನ್ ಎಚ್.ಎಂ. (ತಂದೆ: ಮಂಜುನಾಥ್ ಆಚಾರ್) ಅವರು ಆಗಸ್ಟ್ ೧ರಿಂದ ೩ರವರೆಗೆ ನಡೆಯಲಿರುವ ಆಲ್ ಏಜ್ ಗ್ರೂಪ್ ಅಕ್ರೋಬಾಟಿಕ್ ಜಿಮ್ನಾಸ್ಟಿಕ್ಸ್ ರಾಷ್ಟ್ರೀಯ ಚಾಂಪಿಯನ್‌ಶಿಪ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ.

ಈ ಇಬ್ಬರು ಕ್ರೀಡಾಪಟುಗಳು ಕಳೆದ ಹಲವು ವರ್ಷಗಳಿಂದ ಕಠಿಣ ಪರಿಶ್ರಮ, ಶಿಸ್ತು ಮತ್ತು ನಿರಂತರ ಅಭ್ಯಾಸದ ಮೂಲಕ ತಮ್ಮ ಪ್ರತಿಭೆಯನ್ನು ಬೆಳೆಸಿಕೊಂಡಿದ್ದು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.

ಇವರ ಸಾಧನೆ ಹಾಸನ ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೊಸ ಮೆರುಗು ತಂದಿದ್ದು, ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ. ಈ ಸಾಧನೆಯ ಹಿಂದೆ ಅಕಾಡೆಮಿಯ ಮುಖ್ಯ ತರಬೇತಿದಾರ ಸುಮಂತ್ ಎಂ.ಎಂ. ಅವರ ಪರಿಶ್ರಮ, ಸೂಕ್ತ ಮಾರ್ಗದರ್ಶನ ಮತ್ತು ಗುಣಮಟ್ಟದ ತರಬೇತಿ ಪ್ರಮುಖ ಪಾತ್ರ ವಹಿಸಿದೆ. ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಗುರುತಿಸಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಸಜ್ಜುಗೊಳಿಸಿರುವ ಅವರ ಕಾರ್ಯವನ್ನು ಕ್ರೀಡಾ ವಲಯ ಪ್ರಶಂಸಿಸಿದೆ.

ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಇಬ್ಬರೂ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಹಾಗೂ ಹಾಸನ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎಂಬ ವಿಶ್ವಾಸವನ್ನು ತರಬೇತಿದಾರರು ಹಾಗೂ ಪೋಷಕರು ವ್ಯಕ್ತಪಡಿಸಿದ್ದಾರೆ.

ಈ ಸಾಧನೆ ಹಿನ್ನೆಲೆಯಲ್ಲಿ ಕ್ರೀಡಾಭಿಮಾನಿಗಳು, ಸಾರ್ವಜನಿಕರು, ಪೋಷಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹರ್ಷಾ ಜಿ. ಗೌಡ ಮತ್ತು ಪವನ್ ಎಚ್.ಎಂ. ಅವರಿಗೆ ಅಭಿನಂದನೆ ಸಲ್ಲಿಸಿ, ರಾಷ್ಟ್ರೀಯ ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ಮರಳುವಂತೆ ಶುಭ ಹಾರೈಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *